ಹುಂಚ ಶಿಬಿರದಿಂದ ನವೋದಯ ಶಾಲೆಗೆ 3 ವಿದ್ಯಾರ್ಥಿಗಳು ಆಯ್ಕೆ !

Written by Mahesha Hindlemane

Published on:

ರಿಪ್ಪನ್‌ಪೇಟೆ ; ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಕೊರತೆ ಇದ್ದೆ ಇದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದಂತಹ ವಾತಾವರಣ ಕಲ್ಪಿಸಿಕೊಡುವ ಶಾಲೆಗಳಲ್ಲಿ ನವೋದಯ ಶಾಲೆ ಕೂಡ ಒಂದು. ಈ ಶಾಲೆಯಲ್ಲಿ ಓದುವ ಆಸೆ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಇದ್ದೆ ಇರುತ್ತದೆ. ನವೋದಯ ಪರೀಕ್ಷೆಯಲ್ಲಿ ತೇರ್ಗಡೆ ಆಗಲು ಮಕ್ಕಳಿಗೆ ಉತ್ತಮ ತರಬೇತಿ ಮತ್ತು ಪರಿಶ್ರಮ ಮುಖ್ಯ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ನಿಟ್ಟಿನಲ್ಲಿ ಸತತವಾಗಿ ಕಳೆದ ಐದು ವರ್ಷಗಳಿಂದ ಹುಂಚ ಗ್ರಾಮ ವ್ಯಾಪ್ತಿಯ ಮಕ್ಕಳಿಗೆ ಉಚಿತವಾಗಿ ನವೋದಯ ಪರೀಕ್ಷೆಗೆ ಅಣಿಗೊಳಿಸುವ ಪ್ರಯತ್ನ ಒಂದು ಸಂಸ್ಥೆ ಮಾಡುತ್ತಿದೆ. ಅದುವೇ ಹಳೆ ನವೋದಯ ವಿದ್ಯಾರ್ಥಿಗಳ ಮಿಲನ ಅಸೋಸಿಯೇಷನ್ ಮತ್ತು ಹುಂಚ ಯುವ ಬಳಗದ ಸಂಸ್ಥೆ ನವೋದಯ ಮತ್ತು ಮೊರಾರ್ಜಿ ಶಿಬಿರ.

2021ರಲ್ಲಿ ಪ್ರಾರಂಭಗೊಂಡ ನವೋದಯ ಮತ್ತು ಮೊರಾರ್ಜಿ ಶಿಬಿರ ಇದೀಗ ಉಜ್ವಲ ಯಶಸ್ಸಿನ ಹಾದಿಯಲ್ಲಿದೆ. ಈ ವರ್ಷ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕುಗಳ 22ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ 70 ವಿದ್ಯಾರ್ಥಿಗಳು ಶಿಬಿರದಲ್ಲಿ ತೀವ್ರ ತರಬೇತಿ ಪಡೆದು ಅತ್ಯುತ್ತಮ ಪ್ರಗತಿ ಸಾಧಿಸಿದ್ದಾರೆ. ಈ ಶಿಬಿರದಲ್ಲಿ ಪ್ರತಿ ವರ್ಷ 4-5 ತಿಂಗಳು  ಪರೀಕ್ಷೆಗೆ ದಾಖಲಿಸಿದ ವಿದ್ಯಾರ್ಥಿಗಳಿಗೆ ನವೋದಯ ಮತ್ತು ಮೊರಾರ್ಜಿ ಶಾಲೆಯ ಪರಿಚಯ, ಆಯ್ಕೆ ಪ್ರಕ್ರಿಯೆ ಮಾಹಿತಿ, ಕೋಚಿಂಗ್, ಮಾದರಿ ಪರೀಕ್ಷೆ, ಕಲಿಕಾ ಸಾಮಗ್ರಿಗಳು, ಸಮಯ ನಿರ್ವಹಣೆ ಮತ್ತು ಇತರೆ ಉಪಯುಕ್ತ ಮಾಹಿತಿಗಳನ್ನು ಕೊಡಲಾಗುತ್ತದೆ.

ಪ್ರಸಕ್ತ ವರ್ಷದ ನವೋದಯ ಅರ್ಹತಾ ಪರೀಕ್ಷೆಯಲ್ಲಿ ಈ ಶಿಬಿರದಿಂದ 6ನೇ ತರಗತಿಗೆ ನಡೆದ ಅರ್ಹತಾ ಪರೀಕ್ಷೆಯಲ್ಲಿ ಮೂರು ಮಕ್ಕಳು ಅರ್ಹತೆಯನ್ನು ಪಡೆದಿರುವುದು ವಿಶೇಷ ಸಾಧನೆಯಾಗಿದೆ. ಸೆಪ್ಟೆಂಬರ್‌ನಿಂದ ಜನವರಿ ತನಕ ನಾಲ್ಕು ತಿಂಗಳ ಕಾಲ, ಪ್ರತಿ ಭಾನುವಾರ ತರಗತಿ ಜೊತೆಗೆ ಆನ್‌ಲೈನ್ ಪರೀಕ್ಷೆಗಳು, ಪ್ರೇರಣಾತ್ಮಕ ತರಗತಿಗಳು, ಕ್ವಿಜ್ ಸ್ಪರ್ಧೆಗಳು ಹಾಗೂ ಪಿಎಂಶ್ರೀ – ಜವಾಹರ್ ನವೋದಯ ವಿದ್ಯಾಲಯ ಶಿವಮೊಗ್ಗ ಭೇಟಿ ಮಕ್ಕಳ ಈ ಸಾಧನೆಗೆ ಪೂರಕ ಆಗಿದೆ.

ಶಿಬಿರದ ವಿದ್ಯಾರ್ಥಿಗಳಾದ ಸುಧನ್ವ ಎಸ್ , ಆರಾಧ್ಯ ಕೆ ಪಿ, ಮೈತ್ರಿ ಎಸ್ ಎನ್, 6ನೇ ತರಗತಿಯ ಪ್ರವೇಶಕ್ಕೆ ನವೋದಯ ಪರೀಕ್ಷೆಯನ್ನು ಬರೆದಿದ್ದು, ಮೂವರು ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲೆಯ ಗಾಜನೂರಿನ ನವೋದಯ ಶಾಲೆಗೆ ಅಯ್ಕೆಯಾಗಿದ್ದಾರೆ. ಈ ಫಲಿತಾಂಶ ಮಲೆನಾಡಿನ ಭಾಗದ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸಿದೆ.

ಈ ಶಿಬಿರದ ಸಂಸ್ಥಾಪಕರಾದ, ಹಳೆ ನವೋದಯ ವಿದ್ಯಾರ್ಥಿಯಾದ ಪ್ರಕಾಶ್ ಜೋಯ್ಸ್ (ಕಾಗ್ನಿಜಂಟ್ ಬೆಂಗಳೂರು) ಶಿಬಿರದ ಮಕ್ಕಳ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, “ಈ ಶಿಬಿರ, ಕರ್ನಾಟಕ ರಾಜ್ಯದಲ್ಲಿ ಮೊದಲ ನೂತನ ಪ್ರಯೋಗವಾಗಿದ್ದು, ಉತ್ತಮ ಶಿಕ್ಷಣ ಬಯಸುವ ಗ್ರಾಮೀಣ ಮಕ್ಕಳಿಗೆ ಉಚಿತವಾಗಿ ಸಿಗುವ ಸೌಲಭ್ಯ ಕಲ್ಪಿಸುವ ಒಂದು ವೇದಿಕೆ. ಈ ಯಶಸ್ಸಿಗೆ ಕಾರಣಕರ್ತರಾದ ಶಿಬಿರದ ಶಿಕ್ಷಕ ವೃಂದಕ್ಕೆ, ಸಂಚಾಲಕರಿಗೆ, ಪೋಷಕರಿಗೆ ಮತ್ತು ಮಕ್ಕಳಿಗೆ ಶುಭಾಶಯಗಳನ್ನು” ತಿಳಿಸಿದರು. ಜೊತೆಗೆ ಈ ಸಾಧನೆಯನ್ನು, “ಶಿಬಿರದ ಪ್ರತಿ ಕಾರ್ಯದ ಜೊತೆಗೆ ನಿಂತು, ಎಲ್ಲರನ್ನು ಪ್ರೇರೇಪಿಸಿ, ಆಶೀರ್ವಾದಿಸಿದ ಹುಂಚ ಕ್ಷೇತ್ರದ ಪರಮ ಪೂಜ್ಯ ಗುರುಗಳಾದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಚರಣಕ್ಕೆ ಸಮರ್ಪಿಸುವೆ” ಎಂದರು.

ಶಿಬಿರದ ಮುಖ್ಯ ಸಂಚಾಲಕ ಅಭಿಷೇಕ್ ಕೆ ಮಾತನಾಡಿ, “ಉಚಿತ ನವೋದಯ ತರಬೇತಿ ಶಿಬಿರದ ಕಲ್ಪನೆ, ಗ್ರಾಮೀಣ ಭಾಗದ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಅದಕ್ಕಾಗಿ ಹಳೆಯ ನವೋದಯ ವಿದ್ಯಾರ್ಥಿಗಳು, ಶಿಕ್ಷಕ ವರ್ಗ, ಪೋಷಕರು, ಇತರ ಸಂಚಾಲಕರು, ಹುಂಚ ಭಾಗದ ಗ್ರಾಮಸ್ಥರು ಬಹಳಷ್ಟು ಶ್ರಮಿಸಿದ್ದಾರೆ” ಎಂದು ತಿಳಿಸಿದರು.

ಪ್ರಸಕ್ತ ವರ್ಷದಲ್ಲಿ ಈ ಸಂಸ್ಥೆ ಹುಂಚ, ಕೋಣಂದೂರು, ತ್ಯಾಗರ್ತಿ ಮತ್ತು ಶಿಕಾರಿಪುರದ ನೆಲವಾಗಿಲು ಗ್ರಾಮಗಳಲ್ಲೂ ಕಾರ್ಯ ನಡೆಸುತ್ತಿದೆ. ಈ ವರ್ಷದ ಶಿಬಿರದಲ್ಲಿ ಒಟ್ಟು 200ಕ್ಕೂ ಹೆಚ್ಚು ಮಕ್ಕಳು, ನಾಲ್ಕು ತಾಲ್ಲೂಕಿನಿಂದ ಭಾಗವಹಿಸಿದ್ದು, ಹೊಸನಗರ ತಾಲ್ಲೂಕಿನಿಂದ 3 ಮಕ್ಕಳು ನವೋದಯಕ್ಕೆ ಮೊದಲ ಪಟ್ಟಿಯಲ್ಲಿ ತೇರ್ಗಡೆ ಆಗಿದ್ದಾರೆ.. ಹಾಗೆ ಕೋಣಂದೂರು ಶಿಬಿರದಿಂದ ಅನ್ವಿ ಜೆ ತೇರ್ಗಡೆಯಾಗಿದ್ದಾರೆ.

ಈ ಸಂಸ್ಥೆಯಿಂದ ಕಳೆದ ನಾಲ್ಕು ವರ್ಷಗಳಿಂದ 375 ಮಕ್ಕಳು ಉಚಿತ ತರಬೇತಿ ಪಡೆದು, ಒಟ್ಟು 12 ಮಕ್ಕಳು ನವೋದಯ ಶಾಲೆಗೆ, 2 ಏಕಲವ್ಯ ಶಾಲೆಗೆ ಮತ್ತು 78 ಮಕ್ಕಳು ಮೊರಾರ್ಜಿ ವಸತಿ ಶಾಲೆಗಳಿಗೆ ತೇರ್ಗಡೆಯಾಗಿರುತ್ತಾರೆ. ಖುಷಿಯಾದ ವಿಚಾರ ಏನಂದರೆ, ಈ ಸಂಸ್ಥೆಯಿಂದ ಗ್ರಾಮೀಣ ಭಾಗದ ಮಕ್ಕಳು 2.98 ಕೋಟಿ ರೂಪಾಯಿ ಮೌಲ್ಯದ, ಶೈಕ್ಷಣಿಕ ಉಪಯೋಗ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಪಡೆದುಕೊಂಡಿದ್ದಾರೆ. ಈ ತಂಡ ನವೋದಯ ವಿಷನ್ 2125 ಎಂಬ ಗುರಿ ಮುಂದೆ ಇಟ್ಟುಕೊಂಡು, ದಕ್ಷಿಣ ಭಾರತದ (ಹೈದ್ರಾಬಾದ್ ಪ್ರಾಂತ್ಯ) 77 ನವೋದಯಗಳಲ್ಲಿ, ತಮ್ಮ ವಿಚಾರಧಾರೆ ಹಂಚಿಕೊಂಡು, ಇತರ ನವೋದಯಗಳಿಗೆ ಪ್ರೆರೇಪಿಸುವ ಕಾರ್ಯ ಮಾಡುತ್ತಿದ್ದಾರೆ.

ನವೋದಯ ಮತ್ತು ಮೊರಾರ್ಜಿ ಶಾಲೆಯ ಪರೀಕ್ಷೆಯ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿ ;

ಪ್ರಕಾಶ್ ಜೋಯ್ಸ್, ಸಂಸ್ಥಾಪಕರು ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರ, ನವೋದಯ ರತ್ನ ಮತ್ತು ನವೋದಯ ಭೂಷಣ ಪ್ರಶಸ್ತಿ ವಿಜೇತ, ಮೊ : 9980463013.

Leave a Comment