ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ರಿಪ್ಪನ್‌ಪೇಟೆ ವಿನಾಯಕ ವೃತ್ತ ; ವಾಹನಗಳ ವೇಗಮಿತಿ ನಿಗದಿಗೆ ಆಗ್ರಹ

Written by Mahesha Hindlemane

Updated on:

ರಿಪ್ಪನ್‌ಪೇಟೆ ; ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ಹೃದಯ ಭಾಗದಂತಿರುವ ಇಲ್ಲಿನ ವಿನಾಯಕ ವೃತ್ತದಲ್ಲಿ ನಿತ್ಯ ಒಂದಲ್ಲಾ ಒಂದು ಆಪಘಾತಗಳು ಸಂಭವಿಸುತ್ತಿರುತ್ತಿದ್ದು ಸಾಗರ-ತೀರ್ಥಹಳ್ಳಿ ಸಂಪರ್ಕದ ರಸ್ತೆಯಲ್ಲಿ ವಾಹನಗಳು ವೇಗವಾಗಿ ನುಗ್ಗಿ ಅಪಘಾತಗಳು ಹೆಚ್ಚಾಗುವಂತಾಗಿದೆ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ನಾಲ್ಕು ರಸ್ತೆಗಳ ತಲಾ ಒಂದೊಂದು ಕಿ.ಮೀ. ರಸ್ತೆಗಳನ್ನು ಅಗಲೀಕರಣ ಮಾಡುವುದರೊಂದಿಗೆ ಡಿವೈಡರ್ ನಿರ್ಮಿಸುವ ಮೂಲಕ ಸುಸಜ್ಜಿತ ರಸ್ತೆ ಒಳಚರಂಡಿ ಮತ್ತು ಪಾದಚಾರಿಗಳಿಗೆ ರಸ್ತೆ ಹೀಗೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ಸರ್ಕಾರದಿಂದ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿ ಆರಂಭಗೊಂಡು ಮೂರು ವರ್ಷಗಳಾದರೂ ಕೂಡಾ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ಸಾಗರ-ತೀರ್ಥಹಳ್ಳಿ ಸಂಪರ್ಕದ ಎರಡು ಸಂಪರ್ಕ ರಸ್ತೆ ಒಂದೊಂದು ಕಿ.ಮೀ. ರಸ್ತೆ ಕಾಮಗಾರಿಗೆ 4.85 ಕೋಟಿ ಹಣ ಬಿಡುಗಡೆಯಾಗಿ ಕಾಮಗಾರಿ ಸಹ ಪೂರ್ಣವಾಗಿದ್ದು ವಿನಾಯಕ ವೃತ್ತಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಸರ್ಕಾರದ ವಿಶೇಷ ಅನುದಾನವನ್ನಾಗಿ ಹೆಚ್ಚುವರಿ 2.50 ಕೋಟಿ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಕಾಮಗಾರಿ ಆರಂಭವಾಗಿದ್ದರೂ ಬಿಳಿ ಆನೆಯಂತಾಗಿ ಸಾಗುತ್ತಿದೆ.

ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ಹೃದಯ ಭಾಗವಾಗಿರುವ ವಿನಾಯಕ ಸರ್ಕಲ್ ಅಗಲೀಕರಣ ಅಳತೆ ಮಾಡಿ ಒಳ ಚರಂಡಿಯಿಂದ ಅರು ಅಡಿ ಒಳಗೆ 11 ಕೆ.ವಿ ವಿದ್ಯುತ್ ಕಂಬ ಮತ್ತು ಪಾದಚಾರಿಗಳಿಗೆ ಓಡಾಡಲು ರಸ್ತೆ ಹೀಗೆ ನೀಲ ನಕ್ಷೆ ಸಿದ್ದಗೊಂಡು ಕಾಮಗಾರಿಯನ್ನು ಸಹ ಆರಂಭಿಸಲಾಗಿದ್ದರೂ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಶಾಸಕ ಗೋಪಾಲಕೃಷ್ಣ ಬೇಳೂರು ಕಾಮಗಾರಿಗೆ ಶಂಕುಸ್ಥಾಪನೆಗೆ ಮುನ್ನ ವಿನಾಯಕ ವೃತ್ತದಲ್ಲಿ ಖುದ್ದಾಗಿ ಪರಿಶೀಲನೆ ನಡೆಸಿ ಇಷ್ಟು ಜಾಗವನ್ನು ಬಿಡಿ ಈಗ ಕಷ್ಟವಾಗಬಹುದು ಕಾಮಗಾರಿ ಮುಗಿದ ಮೇಲೆ ನಿಮಗೆ ಗೊತ್ತಾಗುತ್ತದೆಂದು ಮನವರಿಕೆ ಮಾಡಿ ಅಧಿಕಾರಿಗಳಿಗೆ ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಖಡಕ್ ಸೂಚನೆ ನೀಡಲಾದರೂ ಯಾವುದೇ ಪ್ರಯೋಜನವಾಗಿಲ್ಲ.

ಇನ್ನೂ ಸಾಗರ-ತೀರ್ಥಹಳ್ಳಿ ಹಾಗೂ ಹೊಸನಗರ-ಶಿವಮೊಗ್ಗ ಸಂಪರ್ಕದ ಎರಡು ಸಂಪರ್ಕ ರಸ್ತೆ ಹೊಂದಿಕೊಂಡಿರುವ ಶಿವಮೊಗ್ಗ ಕಡೆಯಿಂದ ತೀರ್ಥಹಳ್ಳಿ ರಸ್ತೆಗೆ ತಿರುವುವಿನಲ್ಲಿನ ವಿದ್ಯುತ್ ಕಂಬ ಮತ್ತು ಅಂಗಡಿಗಳಲ್ಲಿ ನೇತು ಹಾಕಲಾದ ಸ್ಟೇಷನರ್ ಐಟಂಗಳಿಂದ ಎದುರು ಕಡೆಯಿಂದ ಬರುವ ವಾಹನಗಳು ಕಾಣದೇ ಸಾಕಷ್ಟು ಅಪಘಾತಗಳು ಸಂಭವಿಸಲು ಕಾರಣವೆಂದು ಕೆಲವರು ಆಡಿಕೊಳ್ಳುತ್ತಿದ್ದರೆ. ಇನ್ನೂ ಕೆಲವರು ಸಾಗರ-ತೀರ್ಥಹಳ್ಳಿ ಸಂಪರ್ಕ ರಸ್ತೆ ವಿಶಾಲವಾಗಿದೆ ಎಂದು ವೇಗವಾಗಿ ನುಗ್ಗಿ ಅಪಘಾತಗಳು ಆಗುತ್ತಿದೆ ಎಂದು ಇದಕ್ಕೆಲ್ಲ ವಿನಾಯಕ ವೃತ್ತದ ನಾಲ್ಕು ರಸ್ತೆಯಲ್ಲಿ ಹಂಪ್ಸ್ ಅಥವಾ ವೇಗ ಮೀತಿ ಇಲ್ಲವೇ ಬ್ಯಾರಿಕೇಡ್ ಅಳವಡಿಕೆವೊಂದೆ ಪರಿಹಾರ ಎನ್ನುತ್ತಾರೆ.

ಒಟ್ಟಾರೆಯಾಗಿ ಲೋಕೋಪಯೋಗಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಹಾಗೂ ಸ್ಥಳೀಯಾಡಳಿತ ವಿನಾಯಕ ವೃತ್ತದಲ್ಲಿ ಆಪಘಾತವನ್ನು ತಡೆಯಲು ತುರ್ತು ಕ್ರಮ ಕೈಗೊಳ್ಳಲು ಮುಂದಾಗುವ ಮೂಲಕ ಅವಘಡವನ್ನು ತಪ್ಪಿಸಲು ಮುಂದಾಗುವರೇ ಎಂಬುದು ಸಾರ್ವಜನಿಕರಲ್ಲಿ ಯಕ್ಷ ಪ್ರಶ್ನೆಯಾಗಿದೆ.

ಕಳೆದ ಒಂದು ತಿಂಗಳ ಅವಧಿಯೊಳಗೆ ಹೊಸನಗರ ರಸ್ತೆಯಿಂದ ಶಿವಮೊಗ್ಗ ಕಡೆ ತೆರಳುತ್ತಿದ್ದ ಗ್ಯಾಸ್ ಲಾರಿಗೂ ಮತ್ತು ಸಾಗರ ತೀರ್ಥಹಳ್ಳಿ ಮಾರ್ಗ ತೆರಳುತ್ತಿದ್ದ ಕಾರಿಗೂ ಡಿಕ್ಕಿ ಸಂಭವಿಸಿ ಜನಮಾನಸದಲ್ಲಿ ಮಾಸುವ ಮುನ್ನವೇ ಇದೇ ಭಾನುವಾರ ಹೊಸನಗರ ರಸ್ತೆಯಿಂದ ಶಿರಸಿ ಕಡೆ ಹೋಗುವ ಮತ್ತು ಸಾಗರ-ತೀರ್ಥಹಳ್ಳಿ ಮಾರ್ಗ ಕೊಪ್ಪಕ್ಕೆ ತೆರಳುತ್ತಿದ್ದ ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಯಾವುದೇ ಪ್ರಾಣ ಹಾನಿಯಾಗದೆ ಗಂಭೀರ ಗಾಯಗಳಾಗಿದ್ದು ನಮ್ಮೂರಿನ ಸಿದ್ದಿವಿನಾಯಕ ಕಾಪಾಡಿದ್ದಾನೆಂದು ಹೇಳುವಂತಾಗಿದೆ.

ಇನ್ನಾದರೂ ಶಾಸಕ ಗೋಪಾಕೃಷ್ಣ ಬೇಳೂರು ವಿನಾಯಕ ವೃತ್ತದಲ್ಲಿನ ಅಪಘಾತಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವರೆ ಕಾದು ನೋಡಬೇಕಾಗಿದೆ.

Leave a Comment