ಹೊಸನಗರ ; ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಾಡುಪ್ರಾಣಿಗಳ ಬೇಟೆಯಾಡಲು ಸಂಚು ರೂಪಿಸಿದ್ದ ತಂಡವೊಂದರ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದ ಘಟನೆ ಹರತಾಳು ಗ್ರಾಮದಲ್ಲಿ ನಡೆದಿದೆ.
ಏಪ್ರಿಲ್ 19 ರಂದು ಹೊಸನಗರ ತಾಲೂಕಿನ ಕೆರೆಹಳ್ಳಿ ಹೋಬಳಿಯ ಹರತಾಳು ಗ್ರಾಮದ ಬಳಿ ಇರುವ ಕೋಟೆತಾರಿಗದಿಂದ ಹರತಾಳು ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಪಕ್ಕದ ಸ.ನಂ. 27ರ ಮೀಸಲು ಅರಣ್ಯದಲ್ಲಿ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಹೊಸನಗರ ವಲಯ ಅರಣ್ಯಾಧಿಕಾರಿಗಳ ತಂಡ ಸ್ಥಳದ ಮೇಲೆ ದಾಳಿ ನಡೆಸಿದೆ.
ದಾಳಿಯ ವೇಳೆ ಡಾಕಪ್ಪ (55) ಎಂಬಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು ಭಾಸ್ಕರ್ (55) ಮತ್ತು ನಾಗರಾಜ್ (53) ಅಧಿಕಾರಿಗಳ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾರೆ. ಸದ್ಯ ಬಂಧಿತ ಡಾಕಪ್ಪನನ್ನು ಹೊಸನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಾರಿಯಾಗಿರುವ ಉಳಿದಿಬ್ಬರು ಆರೋಪಿಗಳಿಗಾಗಿ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.
ಈ ಕಾರ್ಯಾಚರಣೆಯ ವೇಳೆ ಭಾರಿ ಪ್ರಮಾಣದ 45 ಜೀವಂತ ನೆಲಬಾಂಬ್‌ಗಳು ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಹೊಸನಗರ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್., ಉಪ ವಲಯ ಅರಣ್ಯಾಧಿಕಾರಿಗಳಾದ ಅನಿಲ್ ಬೆಳ್ಳಿನವರ್, ಭರತ್ ಕುಮಾರ್, ಗಸ್ತು ಅರಣ್ಯ ಪಾಲಕರಾದ ಮಂಜುನಾಥ ಡಿ., ಪ್ರಶಾಂತ್ ಜಿ., ಪುಟ್ಟಸ್ವಾಮಿ ಕೆ.ವಿ. ಹಾಗೂ ಇಲಾಖೆಯ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





