ಹೊಂಬುಜ ; ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ ನಿಧನಕ್ಕೆ ಹೊಂಬುಜ ಜೈನ ಮಠದ ಪರಮಪೂಜ್ಯ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಶಾಸಕರಾಗಿ ಅವಿರತ ಸಮಾಜ ಸೇವೆಗೈದು ಜನಮಾನಸದಲ್ಲಿ ಪ್ರಾಮಾಣಿಕ-ನಿಷ್ಠಾವಂತ-ಸ್ನೇಹಮಯಿ ರಾಜಕಾರಣಿಯಾಗಿದ್ದರು. ಪಕ್ಷಾತೀತವಾಗಿ ಜನಸೇವೆಯಲ್ಲಿ ಸದಾ ತೊಡಗಿಕೊಳ್ಳುತ್ತಿದ್ದರು. ಸಹಕಾರ ಕ್ಷೇತ್ರದಲ್ಲಿ ಅತ್ಯುತ್ತಮ ರೀತಿಯಲ್ಲಿ ಜನಸಾಮಾನ್ಯರ, ಕೃಷಿಕರ, ಮಹಿಳೆಯರ ಸ್ವಸಹಾಯ ಸಂಘಗಳಿಗೆ ಉತ್ತೇಜನ ಕೊಟ್ಟು, ಸ್ವಾವಲಂಬಿ ಬದುಕಿನತ್ತ ಯಶಸ್ಸುಗಳಿಸುವಂತೆ ಡಿ. ಸುಧಾಕರರವರು ಸದಾ ಬೆಂಬಲಿಸುತ್ತಿದ್ದರು. ಅಲ್ಪಸಂಖ್ಯಾತ ಜೈನ ಧರ್ಮದ ಕುಂದು ಕೊರತೆಗಳನ್ನು ಆಲಿಸಿ, ಸರ್ಕಾರ ಮಟ್ಟದಲ್ಲಿ ಧ್ವನಿಯಾಗಿ ನಿಂತಿರುವ ಏಕೈಕ ಸಚಿವರಾಗಿದ್ದರು.
ಜೈನ ಧರ್ಮಿಯರಾಗಿ ಜೈನ ಸಮಾಜದ ಜಿನಮಂದಿರಗಳ ಜೀರ್ಣೋದ್ದಾರ, ವಸತಿನಿಲಯಗಳ ನಿರ್ಮಾಣ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಸಹಾಯ ಒದಗಿಸಿಕೊಡುತ್ತಿದ್ದರು. ಸಕಲ ಜೈನ ಮಠಗಳ ಭಟ್ಟಾರಕರೊಂದಿಗೆ ಬಾಂಧವ್ಯದಿಂದ ಇದ್ದ ಇವರು ಶ್ರವಣಬೆಳಗೊಳ, ಕಾರ್ಕಳ, ವೇಣೂರು, ಧರ್ಮಸ್ಥಳ ಮಹಾಮಸ್ತಕಾಭಿಷೇಕ, ವರೂರು ನವಗ್ರಹ ತೀರ್ಥದಲ್ಲಿ ನಡೆದ ಮಸ್ತಕಾಭಿಷೇಕದ ಸರ್ಕಾರಿ ಸಮಿತಿಯ ಅಧ್ಯಕ್ಷರಾಗಿ ಇವರು ಮಾಡಿದ ಕೆಲಸ ಶ್ಲಾಘನೀಯ. ಜೈನ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನವನ್ನು ಕೊಡಿಸಿ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು.
ಹೊಂಬುಜದ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಅಭೀಷ್ಠವರ ಪ್ರದಾಯಿನಿ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಅಗಲಿದ ಡಿ. ಸುಧಾಕರರವರ ಆತ್ಮಕ್ಕೆ ಶಾಂತಿ ನೀಡಲೆಂದು, ಅವರ ಪತ್ನಿ, ಪುತ್ರ, ಪುತ್ರಿ ಮತ್ತು ಕುಟುಂಬಸ್ಥರಿಗೆ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





