ಶಿವಮೊಗ್ಗ : ಜಿಲ್ಲೆ ವಿವಿಧ ಭಾಗಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆ ಸಂಬಂಧಿತ ಆರೋಪಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹೊಸನಗರ, ಸಾಗರ, ತೀರ್ಥಹಳ್ಳಿ, ಭದ್ರಾವತಿ ಮತ್ತು ಶಿವಮೊಗ್ಗ ತಾಲ್ಲೂಕುಗಳಲ್ಲಿ ಹಲವಾರು ಮರಳು ಕ್ವಾರಿಗಳ ಮೇಲೆ ಪರಿಶೀಲನೆ ನಡೆಸಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿಯ ಮೇಲೂ ದಾಳಿ ಮಾಡಲಾಗಿದೆ.
ಭದ್ರಾವತಿಯ ನಿಂಬೆಗೊಂದಿ, ಮಂಗೋಟೆ ಮತ್ತು ಸನ್ಯಾಸಿ ಕೊಡಮಗ್ಗಿ ಪ್ರದೇಶಗಳಲ್ಲಿ ಕೂಡ ಲೋಕಾಯುಕ್ತ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿ, ಕೂಡಲಿ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಮಂಡುವಳ್ಳಿ, ತೂದೂರು, ದಬ್ಬಣಗದ್ದೆ ಕ್ವಾರಿಗಳ ಮೇಲೆ ಕೂಡ ಕಾರ್ಯಾಚರಣೆ ನಡೆದಿದೆ. ಹೊಸನಗರ ತಾಲ್ಲೂಕಿನ ಹರಿದ್ರಾವತಿ, ಸುತ್ತಾ, ಸಂಪಕಟ್ಟೆ ಹಾಗೂ ಸಾಗರದ ಆವಿನಹಳ್ಳಿ ಪ್ರದೇಶಗಳಲ್ಲಿಯೂ ಅಧಿಕಾರಿಗಳು ಅಕ್ರಮ ಮರಳು ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕುವೆಂಪು ನಗರದಲ್ಲಿರುವ ಕಚೇರಿ ಮೇಲೂ ಪ್ರಕರಣ ಸಂಬಂಧ ದಾಖಲೆ ಪರಿಶೀಲನೆ ನಡೆಸಲಾಗಿದೆ. ಶಿವಮೊಗ್ಗ ಮತ್ತು ಚಿತ್ರದುರ್ಗದ ಲೋಕಾಯುಕ್ತ ಅಧಿಕಾರಿಗಳು ಒಟ್ಟಾಗಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ಕುರಿತು ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ದಾಳಿ ಜಾರಿಗೆ ತಂದಿದ್ದು, ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿಯೂ ಈ ವಿಷಯ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





