RIPPONPETE ; ಕೋಡೂರು ಗ್ರಾಪಂ ವ್ಯಾಪ್ತಿಯ ಹಿಂಡ್ಲೆಮನೆ ಸ.ಕಿ.ಪ್ರಾ.ಶಾಲೆಯಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕ ಯತೀಶ್ ರವರನ್ನು ಎಸ್.ಡಿ.ಎಂ.ಸಿ ಸದಸ್ಯರು, ವಿದ್ಯಾರ್ಥಿಗಳು, ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಸನ್ಮಾನಿಸಿ ಬೀಳ್ಕೊಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕ ಹನುಮಂತಪ್ಪ, ಯತೀಶ್ ಅವರು ಈ ಶಾಲೆಯ ಮಕ್ಕಳಲ್ಲಿಯೇ ತಮ್ಮ ಭವಿಷ್ಯವನ್ನು ಕಂಡವರು. ಹೆಚ್ಚು ಸಮಯವನ್ನು ಶಾಲೆಗಾಗಿಯೇ ಮೀಸಲಿಟ್ಟಿದ್ದಾರೆ. ಇಂತಹ ಶಿಕ್ಷಕರು ಸಿಗುವುದು ತುಂಬಾ ಅಪರೂಪ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಗಂಗಾನಾಯ್ಕ್ ಮಾತನಾಡಿ, ಶಿಕ್ಷಕ ವೃತ್ತಿ ಇತರ ವೃತ್ತಿಗಿಂತ ಪವಿತ್ರವಾದದ್ದಲ್ಲದೇ ಶ್ರೇಷ್ಠತೆಗೆ ಸಾಕ್ಷಿ. ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಅದನ್ನು ಪಡೆದವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವರು. ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಅಭ್ಯಾಸ ಮಾಡಿ, ಉತ್ತಮ ಫಲಿತಾಂಶ ತಂದು ತಮ್ಮ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಾಗಲೇ ಶಿಕ್ಷಕರಿಗೆ ಬಹುದೊಡ್ಡ ಗೌರವ ಸಿಕ್ಕಂತಾಗುತ್ತದೆ ಎಂದರು.
ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ನಿರ್ದೇಶಕ ನಾಗರಾಜಪ್ಪ ಮಾತನಾಡಿ, ಯತೀಶ್ ಅವರು ಮಲೆನಾಡಿನ ಮಣ್ಣಿನ ಸುಂದರ ಗುಣಕ್ಕೆ ಹೊಂದಿಕೊಂಡಿದ್ದರು. ಇಲ್ಲಿನ ಪೋಷಕರ ಸ್ಪಂದನೆ ಅಭೂತಪೂರ್ವವಾಗಿದೆ. ಕ್ರಿಯಾಶೀಲರು ಯಾವಾಗಲೂ ಉತ್ತಮರಾಗಿರುತ್ತಾರೆ ಎನ್ನವುದಕ್ಕೆ ಇವರೇ ಸಾಕ್ಷಿ ಎಂದರು.
ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ನೆಚ್ಚಿನ ಶಿಕ್ಷಕರ ಬಗ್ಗೆ ಅನಿಸಿಕೆ ನುಡಿಗಳನ್ನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಯತೀಶ್, ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನೆಂದು ಚಿರಋಣಿ. ಕರ್ತವ್ಯ ನಿರ್ವಹಿಸುವ ಜಾಗದಲ್ಲಿ ದೊರೆತ ಪ್ರೀತಿ, ವಿಶ್ವಾಸ ಹಾಗೂ ಸ್ಪಂದನೆಯನ್ನು ಎಂದಿಗೂ ಮರೆಯಲಾಗದು. ಈ ಶಾಲೆಯಲ್ಲಿ 5 ವರ್ಷ ಸೇೆವೆ ಸಲ್ಲಿಸಲು ಸಹಕರಿಸಿದ ನಿಮಗೆ ಧನ್ಯವಾದಗಳು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ದೇವರಾಜ್ ವಹಿಸಿದ್ದರು.
ಕೋಡೂರು ಗ್ರಾಪಂ ಸದಸ್ಯರಾದ ಚಂದ್ರಕಲಾ, ಅನ್ನಪೂರ್ಣ, ಗ್ರಾಪಂ ಮಾಜಿ ಸದಸ್ಯೆ ನಾಗವೇಣಿ, ಸಿ.ಆರ್.ಪಿ ಸಂತೋಷ್, ಯತೀಶ್ ರವರ ಪತ್ನಿ ಶಿಕ್ಷಕಿ ನಿರ್ಮಲಾ, ಎಸ್.ಡಿ.ಎಂ.ಸಿ ಸದಸ್ಯರು, ಗ್ರಾಮಸ್ಥರು, ಅಂಗನವಾಡಿ ಸಿಬ್ಬಂದಿಗಳು, ಅಕ್ಕಪಕ್ಕದ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು, ಮತ್ತಿತರರು ಇದ್ದರು.