HOSANAGARA ; ತಾಲ್ಲೂಕು ಕಸಬಾ ಹೋಬಳಿ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗನಕೊಪ್ಪ ಗ್ರಾಮದ ಸರ್ವೆನಂಬರ್ 13ರಲ್ಲಿರುವ 30 ಗುಂಟೆಗೂ ಹೆಚ್ಚು ಸರ್ಕಾರಿ ಭೂಮಿಯನ್ನು ಕಾನೂನು ಬಾಹಿರವಾಗಿ ಗ್ರಾಮ ಪಂಚಾಯತಿಯ ಪಿಡಿಓ ಅಕ್ರಮವಾಗಿ ಭೂಕಬಳಿಕೆ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿದ್ದು ಇವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ತಕ್ಷಣ ಕಬಳಿಕೆ ಮಾಡಿರುವ ಸರ್ಕಾರಿ ಜಾಗವನ್ನು ವಶಕ್ಕೆ ಪಡೆದುಕೊಳ್ಳಬೇಕು ಇಲ್ಲವಾದರೆ ಕರ್ನಾಟಕ ರಾಜ್ಯ ಹೊಸನಗರ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ವತಿಯಿಂದ ಉಗ್ರ ಹೋರಾಟ ನಡೆಸುತ್ತೇವೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಅರಳಿಸುರಳಿ ನಾಗರಾಜ್ ರವರ ನೇತೃತ್ವದಲ್ಲಿ ಹೊಸನಗರದ ತಹಶೀಲ್ದಾರ್ ರಶ್ಮಿ ಹಾಲೇಶ್‌ರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅರಳಿಸುರಳಿ ನಾಗರಾಜ್, ಹೊಸನಗರ ತಾಲ್ಲೂಕು ಕಸಬಾ ಹೋಬಳಿಯಲ್ಲಿ ಪಂಚಾಯತಿಯ ಪಿಡಿಓರವರು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗನಕೊಪ್ಪ ಗ್ರಾಮದ ಸರ್ವೆನಂಬರ್ 13ರಲ್ಲಿ ಕೊಡಚಾದ್ರಿ ಬಡಾವಣೆಯ ಹಿಂಭಾಗ 30ಗುಂಟೆ ಸರ್ಕಾರಿ ಭೂಮಿಯನ್ನು ಕಾನೂನು ಬಾಹಿರವಾಗಿ ಅತಿಕ್ರಮಿಸಿಕೊಂಡು ಇದಕ್ಕೆ ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಕೆಲವರು ಕುಮ್ಮಕ್ಕು ನೀಡಿ ಅತಿಕ್ರಮವಾಗಿ ಸಿಮೆಂಟ್ ಕಾಂಪೌಂಡನ್ನು ಹಾಕಿರುತ್ತಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ಮಾಡಿ ಸರ್ಕಾರಿ ನೌಕರನಾಗಿದ್ದವರು ಈ ರೀತಿ ಜಾಗ ಕಬಳಿಸಿದರೇ ಸಾಮಾನ್ಯ ಜನರು ಬಿಡುತ್ತಾರೇಯೇ? ಅತಿಕ್ರಮ ಮಾಡಿರುವ ಸರ್ಕಾರಿ ಜಾಗವನ್ನು ಸರ್ಕಾರ ವಶ ಪಡಿಸಿಕೊಳ್ಳಬೇಕು ಕಾಂಪೌಂಡ್ ತೆರವುಗೊಳಿಸಬೇಕು ಗ್ರಾಮ ಪಂಚಾಯತಿ ಪಿಡಿಓ ವಿರುದ್ಧ ಹಾಗೂ ಇವರಿಗೆ ಸಾಥ್ ನೀಡಿದ ಸದಸ್ಯರ ವಿರುದ್ಧ ಇವರಿಗೆ ಬೆಂಬಲಸಿದವರ ಕೆಲವರ ವಿರುದ್ಧ ಭೂ ಕಬಳಿಕೆ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಿಕೊಂಡು ಸರ್ಕಾರದ ಬೆಲೆ ಬಾಳುವ ಜಾಗವನ್ನು ಖುಲ್ಲಪಡಿಸಿ ಸರ್ಕಾರದ ಸ್ವಾದೀನಪಡಿಸಿಕೊಳ್ಳಬೇಕು ಇಲ್ಲವಾದರೇ ಮುಂದಿನ ದಿನದಲ್ಲಿ ತಾಲ್ಲೂಕು ಕಛೇರಿಯ ಮುಂಭಾಗ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಈ ಮನವಿ ಪತ್ರ ನೀಡುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಘಟನಾ ಸಂಚಾಲಕರಾದ ಹರೀಶ ಎ, ತಾಲ್ಲೂಕು ಸಂಚಾಲಕರಾದ ಪ್ರಕಾಶ್ ಬಿ.ಎಂ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.