SHIVAMOGGA ; ಜಾನುವಾರು, ಕುಕ್ಕುಟ ಹಾಗೂ ವನ್ಯಜೀವಿ ರೋಗಗಳ ಪತ್ತೆ ಹಾಗೂ ನಿಯಂತ್ರಣದ ಮೂಲಕ ಪಶುವೈದ್ಯಕೀಯ ರೋಗಶಾಸ್ತ್ರಜ್ಞರು ದೇಶದ ಜಿಡಿಪಿಗೆ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ನ ಪ್ರೊ. ಕೆ.ಸಿ. ವೀರಣ್ಣ ಅಭಿಪ್ರಾಯಪಟ್ಟರು.
ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ‘ಭಾರತೀಯ ಪಶುವೈದ್ಯ ರೋಗ ಶಾಸ್ತ್ರಜ್ಞರ ಸಂಘ’ದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ದಕ್ಷಿಣ ಭಾರತ ಮಟ್ಟದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಶುವೈದ್ಯಕೀಯ ಕ್ಷೇತ್ರದ ಇತರ ತಂತ್ರಜ್ಞರು ಸೇರಿದಂತೆ ರೋಗಶಾಸ್ತ್ರಜ್ಞರ ಕಾರ್ಯಪಡೆಗಳನ್ನು ರಚಿಸುವ ಮೂಲಕ ಪ್ರಾಣಿ-ಮಾನವ-ಪರಿಸರದ ಆರೋಗ್ಯ ರಕ್ಷಣೆಗೆ ಶ್ರಮಿಸಬೇಕು, ತನ್ಮೂಲಕ “ಒಂದು ಆರೋಗ್ಯ” ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕು ಎಂದು ಕರೆ ನೀಡಿದರು.
ಕ.ಪ.ಪ.ಮೀ.ವಿ.ವಿಯ ಪ್ರಥಮ ಕುಲಪತಿಗಳಾದ ಪ್ರೊ. ಶ್ರೀನಿವಾಸಗೌಡರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ‘ಸಮಾಜಕ್ಕೆ, ರೈತರ ಅಭ್ಯುದಯಕ್ಕೆ ರೋಗಶಾಸ್ತ್ರಜ್ಞರು ಅಪೂರ್ವ ಕೊಡುಗೆ ನೀಡುತ್ತಿದ್ದು ಪಶು ವೈದ್ಯಕೀಯ ರೋಗಶಾಸ್ತ್ರಜ್ಞರು ಸದಾ ತಮ್ಮ ಕೌಶಲಗಳನ್ನು ಈ ರೀತಿಯ ತಾಂತ್ರಿಕ ವಿಚಾರ ಸಂಕಿರಣಗಳ ಮೂಲಕ ಅಭಿವೃದ್ಧಿ ಪಡಿಸಿಕೊಂಡು ಪಶುವೈದ್ಯಕೀಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಬೇಕು’ ಎಂದು ತಿಳಿಸಿದರು.
ತಮಿಳುನಾಡು ಪಶು ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಸಿ.ಬಾಲಚಂದ್ರನ್ ಅವರು ಸಮ್ಮೇಳನದ ಅಧಿಕೃತ ಭಾಷಣದಲ್ಲಿ ಪಶುವೈದ್ಯಕೀಯ ರೋಗಶಾಸ್ತ್ರದ ಬೆಳವಣಿಗೆಯನ್ನು ಆದ್ಯಂತವಾಗಿ ವಿವರಿಸಿ ಯುವ ರೋಗಶಾಸ್ತ್ರಜ್ಞರು ಜಾನುವಾರುಗಳ ಆರೋಗ್ಯ ರಕ್ಷಣೆಗೆ ಸದಾ ಸನ್ನದ್ಧರಾಗಿರಬೇಕೆಂದು ಕರೆಕೊಟ್ಟರು.
ಎರಡು ದಿನಗಳ ಸಮ್ಮೇಳನದಲ್ಲಿ ಜಾನುವಾರು, ಕುಕ್ಕುಟ ಹಾಗೂ ವನ್ಯಜೀವಿ ರೋಗಗಳ ಪತ್ತೆಗೆ ಆಧುನಿಕ ತಾಂತ್ರಿಕತೆ ಮತ್ತು ತಂತ್ರಜ್ಞಾಜಗಳ ಕುರಿತು ಹೆಸರಾಂತ ರೋಗಶಾಸ್ತ್ರಜ್ಞರು ತಮ್ಮ ವಿಚಾರಗಳನ್ನು ಮಂಡಿಸಿದರು.
ಕರ್ನಾಟಕ, ಕೇರಳ, ತಮಿಳುನಾಡು, ಪಾಂಡಿಚೆರಿ, ಆಂಧ್ರ ಪ್ರದೇಶ, ತೆಲಂಗಾಣಗಳಿಂದ 150ಕ್ಕೂ ಹೆಚ್ಚು ರೋಗಶಾಸ್ತ್ರಜ್ಞರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ ಉಪಯುಕ್ತ ವಿಚಾರಗಳನ್ನು ಹಂಚಿಕೊಂಡರು.
‘ಭಾರತೀಯ ಪಶುವೈದ್ಯ ರೋಗಶಾಸ್ತ್ರಜ್ಞರ ಸಂಘ’ದ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ. ಜಿ.ಎ ಬಾಲಸುಬ್ರಮಣಿಯನ್‌ರವರು ಸಮಾರೋಪ ಭಾಷಣ ಮಾಡಿ ವಿವಿಧ ವಿಭಾಗಗಳಲ್ಲಿ ಬಹುಮಾನ ಪಡೆದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕ.ಪ.ಪ.ಮೀ.ವಿ.ವಿಯ ಸ್ನಾತಕೋತ್ತರ ವಿಷಯಗಳ ಡೀನ್ ಪ್ರೊ.ಡಿ.ದಿಲೀಪ್‌ಕುಮಾರ್‌ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪಶುವೈದ್ಯಕೀಯ ಕ್ಷೇತ್ರದಲ್ಲಿ ರೋಗಶಾಸ್ತ್ರ ವಿಭಾಗದ ಪ್ರಾಮುಖ್ಯತೆಯನ್ನು ಕೊಂಡಾಡಿದರು.
ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಪ್ರೊ. ಪ್ರಕಾಶ್ ನಡೂರ್‌ರವರ ನೇತೃತ್ವದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಜರುಗಿದ ಈ ರಾಷ್ಟ್ರೀಯ ಸಮ್ಮೇಳನವನ್ನು ಮಹಾವಿದ್ಯಾಲಯದ ಪಶುವೈದ್ಯಕೀಯ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ ಕವಿತಾರಾಣಿಯವರ ಅಧ್ಯಕ್ಷತೆಯಲ್ಲಿ ಡಾ. ಎಸ್.ಎಸ್ ಮಂಜುನಾಥ್ ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ಡಾ.ರವಿಕುಮಾರ್ ಪಿ ಸಹ-ಸಂಘಟನಾ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಆಯೋಜಿಸಿದರು.