HOSANAGARA ; ಕೃಷಿಕರಿಗೆ ಸುಲಭದಲ್ಲಿ ಸಾಲ ಸೌಲಭ್ಯ ಒದಗಿಸುವಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿವೆ. ಇದರಿಂದ ಕೃಷಿಕರಿಗೆ ಕಡಿಮೆ ಬಡ್ಡಿ ದರ ಹಾಗೂ ಸಕಾಲದಲ್ಲಿ ಆರ್ಥಿಕ ಸೌಲಭ್ಯ ದೊರೆಯುತ್ತಿದೆ. ಸಹಕಾರಿ ಸಂಸ್ಥೆಗಳು ಕೃಷಿಕರಿಗೆ ರೈತರಿಗೆ ಬೆನ್ನಲುಬಾಗಿ ಸೇವೆ ಸಲ್ಲಿಸುತ್ತಿದ್ದು ಅದನ್ನು ಮುಂದುವರೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಪಟ್ಟಣದ ಪ್ರತಿಷ್ಠಿತ ಕಳೂರು ಶ್ರೀ ರಾಮೇಶ್ವರ ಕೃಷಿ ಪತ್ತಿನ ಸಹಕಾರದ ಸಂಘದ ವತಿಯಿಂದ ಈಡಿಗರ ಭವನದಲ್ಲಿ ಸಹಕಾರಿಗಳಿಗೆ ಸನ್ಮಾನ ಹಾಗೂ ರೈತ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದ ಅವರು, ವಾಣಿಜ್ಯ ಬ್ಯಾಂಕ್‌ಗಳಲ್ಲಿ ಕೃಷಿ ಸಾಲ ಪಡೆಯುವುದು ತೀರಾ ಕಷ್ಟ. ಆದರೆ ಸಹಕಾರಿ ಸಂಘಗಳು ಈ ನಿಟ್ಟಿನಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಿವೆ. ಸರ್ಕಾರದಿಂದ ಸಿಗುವ ಬಡ್ಡಿ ಸಹಾಯಧನ ಹಾಗೂ ಸಾಲ ಮನ್ನಾ ಪ್ರತಿ ರೈತರಿಗೂ ಲಭ್ಯವಾಗಬೇಕು ಎಂದರು.
ಹಿಂದೆ ಸುಳ್ಳು ಪ್ರಕರಣದಲ್ಲಿ ಡಿಸಿಸಿ ಬ್ಯಾಂಕ್‌ನ ಅಂದಿನ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅವರನ್ನು ಸಿಲುಕಿಸುವ ಯತ್ನ ನಡೆದಿತ್ತು. ಆದರೆ ಅವರ ಬದ್ಧತೆ ಹಾಗೂ ರೈತಪರ ಕಾಳಜಿಯಿಂದ ಇಂದು ಮತ್ತೆ ಅಧ್ಯಕ್ಷರಾಗಿದ್ದಾರೆ. ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬೆಳೆಯಲು ಅವರ ಅಪಾರ ಶ್ರಮವಿದೆ ಎಂದರು.
ಕಾರ‍್ಯಕ್ರಮ ಉದ್ಘಾಟಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿ, ಹೊಸನಗರ ತಾಲೂಕಿನಲ್ಲಿ ಸುಮಾರು 25 ಸಾವಿರ ರೈತರು ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಸದಸ್ಯತ್ವ ಹೊಂದಿದ್ದಾರೆ. 13 ಸಾವಿರದಷ್ಟು ಮಂದಿ 100 ಕೋಟಿ ರೂ. ಮೊತ್ತದ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಪಡೆದಿದ್ದಾರೆ ಎಂದರು.
ಶಿಮುಲ್ ಅಧ್ಯಕ್ಷ ಎನ್.ಎನ್.ವಿದ್ಯಾಧರ ಮಾತನಾಡಿ, ಹೊಸದಾಗಿ ಹಾಲು ಉತ್ಪನ್ನ ಸಹಕಾರ ಸಂಘಗಳ ಸ್ಥಾಪನೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದರು.
ಸಂಸ್ಥೆಯ ಅಧ್ಯಕ್ಷ ಡಿ.ಆರ್.ವಿನಯ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿನ ಸಹಕಾರಿ ಸಂಸ್ಥೆಗಳು ಈ ಮಟ್ಟದಲ್ಲಿ ಬೆಳೆಯಲು ಬೆಳೆಸಲು ಆರ್.ಎಂ. ಮಂಜುನಾಥ್ ಗೌಡರವರೇ ಕಾರಣರಾಗಿದ್ದು ಮುಚ್ಚುವ ಹಂತದಲ್ಲಿದ್ದ ಕೆಲವು ಸಹಕಾರಿಗಳನ್ನು ಸಂಸ್ಥೆಗಳನ್ನು ಮೇಲೆತ್ತಿ ಇಂದು ಪ್ರತಿಷ್ಥಿತ ಸಂಸ್ಥೆಯಾಗಿ ಸಾರ್ವಜನಿಕರ ಹಾಗೂ ರೈತಾಪಿ ಕುಟುಂಬಗಳ ಜೀವನಾಡಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಎಂ.ಎಂ.ಪರಮೇಶ್, ಜಿ.ಎನ್.ಸುಧೀರ್, ಪ್ರಮುಖರಾದ ನಾಗಪ್ಪ, ಗಂಗಾಧರ ನಾಯಕ್, ಚಿನ್ನಪ್ಪ, ರುದ್ರಪ್ಪಗೌಡ, ಜಿ.ಎಸ್.ರವಿ, ಜಯಕುಮಾರ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಮತ್ತಿತರರು ಇದ್ದರು.
ಅರ್ಹ ರೈತರಿಗೆ ಹೊಸ ಸಾಲ ವಿತರಣೆ ನಡೆಯಿತು. ನೂತನವಾಗಿ ಆಯ್ಕೆಯಾದ ಸಹಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.