HOSANAGARA ; ತಾಲ್ಲೂಕಿನ ಎಂ ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿ ಎಸ್‌ರವರು ಗ್ರಾಮ ಪಂಚಾಯತಿಗೆ ಬಂದು ಒಂದೂವರೆ ವರ್ಷವಾಗಿದೆ. ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಇವರನ್ನು ಯಾವುದೇ ಕಾರಣಕ್ಕೂ ಬೇರೆ ಎಲ್ಲಿಗೂ ವರ್ಗಾಯಿಸದಂತೆ ಹೊಸನಗರ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್‌ಗೆ ಬಿಜೆಪಿ ಬೆಂಬಿತ ಸದಸ್ಯರು ಮನವಿ ಸಲ್ಲಿಸಿದ್ದಾರೆ.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕಾಲಸಸಿ ಸತೀಶ್, ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ಪಿಡಿಒ ರವಿ ಎಸ್ ಕಳೆದ ಒಂದೂವರೆ ವರ್ಷದಿಂದ ನಮ್ಮ ಗ್ರಾಮ ಪಂಚಾಯತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಕೆಲವು ಗ್ರಾಮ ಪಂಚಾಯತಿ ಸದಸ್ಯರು ಕಾನೂನು ಬಾಹಿರ ಕೆಲಸಗಳನ್ನು ಮಾಡುವಂತೆ ಇವರಿಗೆ ಒತ್ತಡ ಹೇರಿದಾಗ ಇವರು ನಿರಾಕರಿಸಿದ್ದಾರೆ. ಇವರನ್ನು ತಕ್ಷಣ ವರ್ಗಾಯಿಸಬೇಕೆಂದು ಇವರ ವಿರುದ್ಧ ಸುಳ್ಳು ಆಪಾದನೆ ಮಾಡಿ ಗ್ರಾಮ ಪಂಚಾಯಿತಿ ಸದಸ್ಯರನ್ನು ನಂಬಿಸಿ ಅವರಿಂದ ಸಹಿ ಸಂಗ್ರಹಿಸಿರುತ್ತಾರೆ. ಈ ಪತ್ರವನ್ನು ಇಟ್ಟುಕೊಂಡು ಇವರನ್ನು ವರ್ಗಾವಣೆಯ ಸಂಚು ರೂಪಿಸುತ್ತಿದ್ದಾರೆ. ಪಿಡಿಒ ರವಿಯವರ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರು ಬಂದಿಲ್ಲ. ಇವರ ಕರ್ತವ್ಯದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ದುರುದ್ದೇಶದಿಂದ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಕಾರ್ಯನಿರ್ವಹಣಾಧಿಕಾರಿ ಕಛೇರಿಯ ಮುಂದೆ ಜನವರಿ 7ರಿಂದ ಪಿಡಿಒ ವರ್ಗಾಯಿಸುವವರೆಗೆ ಅನಿರ್ದಿಷ್ಟ ಕಾಲ ಪ್ರತಿಭಟನೆ ಮಾಡುತ್ತೇವೆ. ಮಾಧ್ಯಮಗಳಲ್ಲಿ ಈ ವಿಚಾರ ಈಗಾಗಲೇ ಬಿತ್ತರವಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ಗ್ರಾಮ ಪಂಚಾಯತಿ ಗ್ರಾಮಸ್ಥರಿಗೆ ತಪ್ಪು ಸಂದೇಶ ಹೋಗುವುದರ ಜೊತೆಗೆ ಗ್ರಾಮ ಪಂಚಾಯತಿಯ ಮರ್ಯಾದೆ ಹಾಳಾಗುತ್ತಿದೆ. ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯತಿಯ ಅಧ್ಯಕ್ಷರ ಧರಣಿಯನ್ನು ನಡೆಸದಂತೆ ತಡೆ ಮಾಡಬೇಕು. ಇಲ್ಲವಾದರೇ ಗ್ರಾಮ ಪಂಚಾಯತಿ ಸದಸ್ಯರಾದ ನಾವುಗಳು ಗ್ರಾಮ ಪಂಚಾಯತಿಯ ಮುಂಭಾಗ ಪಿಡಿಒ ರವಿಯವರೇ ಬೇಕು ಎಂದು ನಾಳೆಯಿಂದಲೇ ಪ್ರತಿಭಟನೆಗೆ ಇಳಿಯಲಾಗುವುದು ಎಂದು ತಿಳಿಸಿದರು.
ಮನವಿ ಪತ್ರ ನೀಡುವ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾದ ಚಿಕ್ಕಮಣತಿ ಶ್ರೀಧರ, ನಿರ್ಮಲ ರಾಘವೇಂದ್ರ, ಬೇಬಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಓಂಕೇಶ್ ಗೌಡ ಉಪಸ್ಥಿತರಿದ್ದರು.
ಬಿಜೆಪಿಯಲ್ಲಿಯೇ ಒಡಕು !
ಇತ್ತೀಚಿನ ತಿಂಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಎಲ್ಲರೂ ಒಟ್ಟಾಗಿ ಬಿಜೆಪಿ ಬೆಂಬಲಿತ ಸದಸ್ಯ ಪ್ರವೀಣ್‌ಕುಮಾರ್‌ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಎಲ್ಲ ಬಿಜೆಪಿ ಸದಸ್ಯರು ಒಟ್ಟಾಗಿ ಗ್ರಾಮ ಪಂಚಾಯತಿಯ ಕೆಲಸವನ್ನು ಮಾಡುತ್ತಿದ್ದರು 15 ದಿನಗಳಿಂದ ಬಿಜೆಪಿ ಬೆಂಬಲಿತ ಅಧ್ಯಕ್ಷ, ಸದಸ್ಯರ ಮಧ್ಯೆ ಒಡಕು ಮೂಡಿದ್ದು ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರವೀಣ್‌ಕುಮಾರ್ ಈಗಿರುವ ಪಿಡಿಒ ಬೇಡ ಎಂದು ಮಂಗಳವಾರ ಧರಣಿ ನಡೆಸಿದರೆ ಬಿಜೆಪಿ ಬೆಂಬಲಿತ ಸದಸ್ಯರು ಗ್ರಾಮ ಪಂಚಾಯತಿಯ ಮುಂಭಾಗ ಈಗಿರುವ ಪಿಡಿಒ ಬೇಕು ಎಂದು ಧರಣಿ ನಡೆಸಲು ಮುಂದಾಗಿದ್ದಾರೆ.