ಹೊಸನಗರ ; ಆಸ್ತಿ ಅಂತಸ್ತು ಗಳಿಕೆಗಿಂತಲೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಾವಶ್ಯಕವಾಗಿದೆ ಎಂದು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಸಂತ ಅಂತೋಣಿ ದೇವಾಲಯದಲ್ಲಿ ಭಾನುವಾರ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ಹಾಗೂ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಹೊಲಿಗೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ಯಾಂತ್ರಿಕ ಯುಗ. ಮನುಷ್ಯ ಹಣ ಗಳಿಕೆಯನ್ನೇ ಪ್ರಧಾನ ಗುರಿಯಾಗಿಸಿಕೊಂಡು ಸ್ಪರ್ಧೆಗಳಿದಿದ್ದಾನೆ. ಆದರೆ ನೆಮ್ಮದಿ ಆರೋಗ್ಯ ದೂರವಾಗುತ್ತಿದೆ. ಭವಿಷ್ಯದಲ್ಲಿ ಇದು ಗಂಭೀರ ಸಮಸ್ಯೆಯಾಗಲಿದೆ. ತೀವ್ರ ಒತ್ತಡ, ಧಾವಂತದ ಜೀವನ ಎಂದಿಗೂ ಒಳ್ಳೆಯದಲ್ಲ. ಮನೋದೈಹಿಕ ಸದೃಡತೆ ಸಾಧಿಸಲು, ಉತ್ತಮ ಆಹಾರ, ವ್ಯಾಯಾಮ, ಉತ್ತಮ ಜೀವನಶೈಲಿಯಿಂದ ಮಾತ್ರ ಸಾದ್ಯ ಜಂಕ್‌ಫುಡ್, ನಿದ್ರಾಹಾರಗಳಲ್ಲಿ ಶಿಸ್ತು ಇಲ್ಲದ ಕಾರಣದಿಂದಾಗಿಯೇ ಇಂದು ಎಳೆಯ ವಯಸ್ಸಿನಲ್ಲಿಯೇ ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದರು.
ಎಸ್‌ಎಂಎಸ್‌ಎಸ್‌ಎಸ್ ಸಂಸ್ಥೆಯ ನಿರ್ದೇಶಕ ಫಾದರ್ ಪಿಯುಸ್ ಡಿಸೋಜ ಮಾತನಾಡಿ, ಸಂಸ್ಥೆಯು ಕಳೆದ 35 ವರ್ಷಗಳಿಂದ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಆರೋಗ್ಯ ಸಮಸ್ಯೆಗಳು ಕಂಡು ಬಂದಾಗ ಗುಣಮಟ್ಟದ ಸೌಲಭ್ಯಗಳು ಸಿಗಬೇಕು ಎನ್ನುವುದು ನಮ್ಮ ಧ್ಯೇಯವಾಗಿದೆ. ಜನಪರ ಸೇವೆ ನೀಡುವ ಉದ್ದೇಶದಿಂದ ನಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರವಾಗಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಸ್ವಉದ್ಯೋಗ ತರಬೇತಿಗಳನ್ನು ನೀಡಲಾಗುತ್ತಿದೆ ಎಂದರು.
ಸಂತ ಅಂತೋನಿ ದೇವಾಲಯದ ಫಾದರ್ ಸೈಮನ್ ಹೋರ್ಟಾ, ವೈದ್ಯೆ ಡಾ.ವಿಸ್ಮಯ, ಶಶಿಕಲಾ ಹರೀಶ್, ಎಸ್‌ಎಂಎಸ್‌ಎಸ್‌ಎಸ್ ಸಂಸ್ಥೆಯ ಮಧುಸೂದರ್, ಜ್ಯೋತಿ, ನಳಿನಿ, ಅಂಬಿಕ, ಚೈತ್ರ ಮತ್ತಿತರರು ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.