ಇರುವಕ್ಕಿಯಲ್ಲಿ ಘಟಿಕೋತ್ಸವ ಸುಗ್ಗಿ ಸಂಭ್ರಮ | ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ; ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

Written by malnadtimes.com

Updated on:

ಸಾಗರ ; ನಮ್ಮದು ಕೃಷಿ ಪ್ರಧಾನ ದೇಶ. ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ. ಕೃಷಿ ಮತ್ತು ತೋಟಗಾರಿಕೆ ಪದವೀಧರರು, ವಿದ್ಯಾರ್ಥಿಗಳು ರೈತರಿಗೆ ಲಾಭದಾಯಕವಾದ, ಪರಿಸರಕ್ಕೆ ಪೂರಕವಾದ ಕೃಷಿ ಸಂಶೋಧನೆಗಳನ್ನು ಕೈಗೊಂಡು ಕೊಡುಗೆ ನೀಡಬೇಕೆಂದು ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್‌ಚಂದ್ ಗೆಹ್ಲೋಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

WhatsApp Group Join Now
Telegram Group Join Now
Instagram Group Join Now

ಬುಧವಾರ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಇಲ್ಲಿ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಸುಗ್ಗಿ ಸಂಭ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರ ದೇಶದ ಬೆನ್ನೆಲಯಬಾಗಿದ್ದು, ಈ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತಮ್ಮ ಜ್ಞಾನದಿಂದ ಎತ್ತರಕ್ಕೆ ಬೆಳೆಯಬೇಕು. ಹೆಚ್ಚುತ್ತಿರುವ ಜನಸಂಖ್ಯೆ, ನೈಸರ್ಗಿಕ ಸಂಪನ್ಮೂಲಗಳ ಕೊರತೆ ಹಿನ್ನೆಲೆಯಲ್ಲಿ ನಿಮ್ಮ ಪಾತ್ರ ದೊಡ್ಡದಿದೆ. ಕೌಶಲ್ಯ ಮತ್ತು ತಂತ್ರಜ್ಞಾನವನ್ನು ಸಮರ್ಪಕವಾಗಿ ಅಳವಡಿಸಿಕೊಂಡು ಹೊಸ ಹೊಸ ಸಂಶೋಧನೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಕೃಷಿ‌ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನ, ಸ್ಮಾರ್ಟ್ ಅಗ್ರಿಕಲ್ಚರ್ ಕಡೆ ಗಮನ ಹರಿಸಬೇಕಿದೆ.

ರೈತರಿಗೆ ಕಡಿಮೆ ಖರ್ಚು ಮಾಡಿ ಅಧಿಕ ಇಳುವರಿ ಪಡೆಯಲು ತಾವು ಸಹಕಾರಿಯಾಗಬೇಕು. ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯವೆಸಗಬೇಕು. ಇಸ್ರೇಲ್ ಅಂತಹ ಸಣ್ಣ ದೇಶ ನವೀನ ಸಾಧನ, ಕಡಿಮೆ ನೀರು ಬಳಸಿಕೊಂಡು ಉತ್ತಮ‌ಆದಾಯ ಪಡೆದು ಬೆಳೆಯುತ್ತಿದೆ. ನಮ್ಮಲ್ಲಿಯೂ ಅಂತಹ ತಂತ್ರಜ್ಞಾನ, ಸಾಧನ ಬಳಸಿಕೊಂಡು ಮುಂದುವರೆಯಬೇಕಿದೆ ಎಂದರು.
ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಪ್ರೊ.ಎಲ್.ಎಸ್.ಶಶಿಧರ್ ಘಟಿಕೋತ್ಸವದ ಮುಖ್ಯ ಭಾಷಣಕಾರರಾಗಿ ಮಾತನಾಡಿ, ನಮ್ಮ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ವಿಸ್ತರಣೆಯ ಮೇಲೆ ಹಾಗೂ ನಾಶವಾಗುತ್ತಿರವ ಆವಾಸಸ್ಥನಗಳನ್ನು ಪುನಶ್ಚೇತನಗೊಳಿಸಿ ಮುಂದುವರಿಯಬಲ್ಲ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳುವುದರ ಮೇಲೆ ನಮ್ಮ ಗಮನವನ್ನು ಕೇಂದ್ರಿಕರಿಸುವುದು ಅವಶ್ಯಕವಾಗಿದೆ.

ಹವಾಮಾನದಲ್ಲಿನ ಬದಲಾವಣೆ ಬೇರೆಲ್ಲಾ ಕ್ಷೇತ್ರಗಳಿಗಿಂತಲು ಕೃಷಿ ಹಾಗೂ ಪರಿಸರದ ಮೇಲೆ ಹೆಚ್ಚು ಪರಿಣಾಮ ಮಾಡುತ್ತದೆ. ಒಳ್ಳೆಯ ಹವಾಮಾನ, ಮಣ್ಣಿನ ಪರಿಸ್ಥಿತಿ ಹಾಗೂ ಸನಿಹದಲ್ಲಿ ಅರಣ್ಯ ಪ್ರದೇಶ ಇರುವಿಕೆ ಇವುಗಳ ಮೇಲೆ ಕೃಷಿ ನಿರ್ಭರವಾಗಿದೆ ಎಂದರು.

ಪರಿಸರ ವ್ಯವಸ್ಥೆ ಹಾಗೂ ಜೈವಿಕ ವೈವಿಧ್ಯತೆ ಇವುಗಳಿಂದ ಕೃಷಿ ಹಾಗೂ ಪಶು ಸಂಗೋಪನೆ ಇವೆರಡು ನೇರವಾಗಿ ಪ್ರಭಾವಿತವಾಗುತ್ತದೆ. ನಮ್ಮ ದೇಶ ತನ್ನ ಪ್ರಜೆಗಳೆಲ್ಲರೂ ಆಹಾರ ಮತ್ತು ಪೌಷ್ಟಿಕತೆಯನ್ನು ಒದಗಿಸುವಲ್ಲಿ ಆತ್ಮನಿರ್ಭರವಾಗಲು ಮತ್ತು ಮುಂದಿನ ದಶಕಗಳಲ್ಲಿ ಸಂಭವಿಸಬಹುದಾಗ ನೈಸರ್ಗಿಕ ಹಾಗೂ ಮಾನವ ನಿರ್ಮಿತ ದುರಂತಗಳ ಸಮಯದಲ್ಲಿಯೂ ಆಹಾರ ಸಂರಕ್ಷಣೆಯನ್ನು ನೀಡಲು ಸಫಲವಾಗಿದೆ ಎಂದು ಹೇಳಿದರು.

ನಾವಿನ್ನೂ ಅಭಿವೃದ್ಧಿಯ ಹೊಂದುತ್ತಿರುವ ಹಂತದಲ್ಲಿ ಇದ್ದೇವೆ. ಭಾರತದ ಜನಸಂಖ್ಯೆಯ ದೊಡ್ಡ ಭಾಗ ಬಡತನದ ರೇಖೆಯ ಕೆಳಗೆ ಇದೆ. ಉತ್ತಮ ಮತ್ತು ಪೌಷ್ಟಿಕ ಆಹಾರದ ಲಭ್ಯತೆಯಲ್ಲಿ ಅಸಮಾನತೆ ಈಗಲೂ ಬಹಳ ಇದೆ. ನಮ್ಮ ಕೃಷಿ ಪದ್ದತಿಯಲ್ಲಿ ಅತಿಯಾದ ನೀರು ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ ಹಾಗೂ ತ್ರೀವ ವ್ಯವಸಾಯ ಪದ್ದತಿಗಳಿಂದಾಗಿ ಕೃಷಿ ಉತ್ಪಾದಕತೆಯ ಮೇಲೆ ಅತೀವ ಒತ್ತಡವುಂಟಾಗಿದೆ. ವ್ಯವಸಾಯ ಖರ್ಚು ವೆಚ್ಚದಲ್ಲಿ ಗಣನೀಯ ಏರಿಕೆಯಾಗಿದೆ ಹಾಗೂ ಅದರಿಂದ ಬರುವ ಆದಾಯ ಕುಂಠಿತವಾಗುತ್ತಿದೆ ಎಂದರು.

ಈ ವಿಶ್ವವಿದ್ಯಾಲಯವು ತನ್ನ ಸಂಶೋಧನೆ ಹಾಗೂ ಶಿಕ್ಷಣದ ಚಟುವಟಿಕೆಗಳಲ್ಲಿ ಇಂತಹ ಸವಾಲಾಗುವ ಸಮಸ್ಯೆಗಳ ಬಗ್ಗೆ ಗಮನವನ್ನು ಕೇಂದ್ರಿಕರಿಸಿದೆಯೆಂದು ತಿಳಿದು ನನಗೆ ಸಂತೋಷವಾಗಿದೆ. ಮೊದಲನೆದಾಗಿ ಇದು ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಶಾಸ್ತ್ರಗಳನ್ನೊಳಗೊಂಡ ಒಂದು ಸಮಗ್ರ ವಿಶ್ವವಿದ್ಯಾಲಯವಾಗಿದೆ. ಸುಸ್ಥಿರ ಜೀವನಕ್ಕೆ ಈ ಮೂರು ವಿಜ್ಞಾನಗಳ ಕೊಡುಗೆ ಅವಶ್ಯಕವಾಗಿದೆ. ಕೃಷಿ ಅರಣ್ಯ ಹಾಗೂ ಆಹಾರಧಾನ್ಯಗಳು, ಹಣ್ಣು ತರಕಾರಿಗಳು ಸೇರಿದಂತೆ ಬೆಳೆಗಳ ಆವರ್ತನೆ ಇವುಗಳಿಂದ ಭೂಮಿಯ ಕ್ಷಮತೆಯನ್ನು ಉತ್ತಮಗೊಳಿಸುವುದರ ಜೊತೆಗೆ ರೈತರ ಆದಾಯವನ್ನು ಹೆಚ್ಚಿಸಬಹುದು. ಈ ವಿಶ್ವವಿದ್ಯಾಲಯದವು ಕೃಷಿ ಅರಣ್ಯ, ಜೈವಿಕ ಗೊಬ್ಬರಗಳು, ಜೈವಿಕ ನಿಯಂತ್ರಣ ಸೂತ್ರಗಳು, ಜೈವಿಕ ಇಂಧನಗಳು, ಪರಾಗಸ್ಪರ್ಷಗಳು ಇತ್ಯಾದಿ ವಿಷಯಗಳಲ್ಲಿ ನವೀನ ಉಪಕ್ರಮಗಳನ್ನು ತೆಗೆದುಕೊಂಡಿದೆ. ಪಶ್ಚಿಮಘಟ್ಟದಲ್ಲಿ ಜೀವಿಸುತ್ತಾ, ಅಲ್ಲಿನ ಪರಿಸರವನ್ನು ಸ್ವಾಭಾವಿಕವಾಗಿ ಹಾಗೂ ಸಾಂಪ್ರದಾಯಿಕವಾಗಿ ರಕ್ಷಿಸುತ್ತಿರುವ ರೈತ ಸಮುದಾಯಕ್ಕೆ ಈ ವಿಶ್ವವಿದ್ಯಾಲಯವು ಪ್ರಾಮುಖ್ಯತೆಯನ್ನು ಕೊಡುತ್ತಿದೆಯೆಂದು ನಾನು ಕೇಳಿದ್ದೇನೆ ಎಂದು ತಿಳಿಸಿದರು.

ನಮ್ಮ ರೈತರು ಕೃಷಿ ಪದ್ದತಿಗಳಲ್ಲಿನ ಹೊಸ ಆವಿಷ್ಕಾರಗಳಿಂದ ದೂರ ನಿಂತಿಲ್ಲ. ಅವರಲ್ಲಿ ಆ ರೀತಿ ಬದಲಾವಣೆಗಳನ್ನು ಹೊಂದಿಕೊಳ್ಳುವ, ಅಳವಡಿಸಿಕೊಳ್ಳುವ ಸಾಮರ್ಥ್ಯವಿಲ್ಲದಿದ್ದರೆ ನಾವು ದೇಶದ ಸ್ವಾತಂತ್ರ್ಯ ನಂತರದ ಇಷ್ಟು ಕಡಿಮೆ ಸಮಯದಲ್ಲೇ ಆಹಾರ ಮತ್ತು ಪೌಷ್ಠಿಕತೆಯಲ್ಲಿ ಸ್ವಾವಂಲಬಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಕೃಷಿ ಪದ್ದತಿಗಳು ನಮ್ಮ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪದ್ದತಿಗಳನ್ನು ಹುಚ್ಚಾಗಿ ಪ್ರಭಾವಗೊಳಿಸಿದೆ. ಭಾರತೀಯ ತತ್ವಶಾಸ್ತ್ರ ಮತ್ತು ಪದ್ದತಿಗಳು ತರ್ಕಬದ್ಧವಾಗಿದ್ದರೂ, ನಮ್ಮ ಸಮಾಜದಲ್ಲಿ ಈಗಲೂ ಮೂಡನಂಭಿಗಳು ಹಾಗೂ ಹುಸಿ ವಿಜ್ಞಾನಗಳು ಹೇರಳವಾಗಿವೆ. ಕುತೂಹಲಕಾರಿ ಅಂಶವೆಂದರೆ, ತರ್ಕಬದ್ಧ ಮತ್ತು ಆಧುನಿಕ ಜ್ಞಾನವನ್ನು ಸ್ವೀಕರಿಸುವುದರಲ್ಲಿ ನರಗವಾಸಿಗಳಿಗಿಂತ, ರೈತರೇ ಹೆಚ್ಚಾಗಿ ಮುಂದಿದ್ದಾರೆಂದು ಗಮನಿಸಲಾಗಿದೆ ಎಂದರು.

ಸರ್ವಜ್ಞ ಹೇಳುವಂತೆ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು. ಡಿವಿಜಿ ಅವರು ಋಷಿಗಳು, ರೈತರನ್ನು ಕೃಷಿ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ನಮ್ಮ ಸಹಭಾಗಿಗಳನ್ನಾಗಿ ಮಾಡಿಕೊಂಡು ಸಮಾಜದಲ್ಲಿ ತರ್ಕಬದ್ಧತೆಯನ್ನು ಹೆಚ್ಚಾಗಿ ತರಲು ಇದು ಸಕಾಲವಾಗಿ ಎಂದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಆರ್.ಜಗದೀಶ್ ಸ್ವಾಗತ ಭಾಷಣ ಮಾಡಿ, ಸಂಕ್ಷಿಪ್ತ ವರದಿ ಸಲ್ಲಿಸಿದರು.

ಚಿನ್ನದ ಪದಕ :

ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ 17 ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದಾರೆ. ಅವರಿಗೆ ಒಟ್ಟು 31 ಚಿನ್ನದ ಪದಕಗಳನ್ನು ನೀಡಲಾಯಿತು. ಘಟಿಕೋತ್ಸವದಲ್ಲಿ ಒಟ್ಟು 994 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಕೃಷಿ, ತೋಟಗಾರಿಕೆ, ಅರಣ್ಯ ವಿಭಾಗಗಳಲ್ಲಿ 793 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ 176 ವಿದ್ಯಾರ್ಥಿಗಳು ಹಾಗೂ 25 ವಿದ್ಯಾರ್ಥಿಗಳು ಪಿ.ಹೆಚ್.ಡಿ. ಪದವಿ ಪಡೆದುಕೊಂಡರು.

28 ಎಂ.ಎಸ್ಸಿ. ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದು ಅವರಿಗೆ ಒಟ್ಟು 33 ಚಿನ್ನದ ಪದಕಗಳನ್ನು ನೀಡಲಾಯಿತು. 10 ಪಿ.ಹೆಚ್.ಡಿ. ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದು, ಅವರಿಗೆ ಒಟ್ಟು 12 ಚಿನ್ನದ ಪದಕಗಳನ್ನು ನೀಡಲಾಯಿತು.

ಪದವಿ ಚಿನ್ನದ ಪದಕ ವಿಜೇತರು (2025) ;

ಸಂಜೀತಾ ಎನ್ ಎಸ್ 4 ಪದಕ. ಪ್ರತೀಕ್ಷಾ ಎಲ್ ನಾಯ್ಕ 2 ಚಿನ್ನದ ಪದಕ. ಮೋಹನ್ ಪ್ರಸಾದ್ ಜಿ 1, ಚಂದನ ಆರ್ 1, ಅರವಿಂದ ಹೆಚ್ ಆರ್ 1, ಯಶಸ್ವಿನಿ ಎಂ.ಬಿ 1, ಸುಪ್ರಿತ ಎಂ.ಎಂ. 1, ಅಭಿಜ್ಞಾ ನಾಯಕ್ 1 ಒಟ್ಟು 25 ಚಿನ್ನದ ಪದಕ.

ಸ್ನಾತಕ ಪದವಿ ಚಿನ್ನದ ಪದಕ ವಿಜೇತರು :

ಲಹರಿ 2, ಸಚಿನ್ ಎಲ್ ಎಂ, ಲೇಖನ ತಲಾ 2 ಮತ್ತು ಅಭಿಷೇಕ್ ಜೆ.ಕೆ, ಕಮಲಶ್ರೀ ಎಸ್ ಡಿ , ಚಂದನ ಎಸ್, ನಂದಿತಾ ಸಿನ್ಹಾ, ಮಂಜುಶ್ರೀ ಬಿ ಯು, ಅಲೇಕ್ಯ ಬಿ.ಎಂ, ಅನಿಲ್.ಹೆಚ್.ಎಂ., ಜ್ಯೋತಿ ಈ ತೊಂಡಿ, ಸಿಂಚನ, ಮಾಧರ್ಯ ಗೌಡ, ಸಲ್ಮಾ, ಸ್ವಾತಿ ಬಿ ತಲಾ 1 ಪದಕ ಒಟ್ಟು 18 ಚಿನ್ನದ ಪದಕ ಪಡೆದು ಕೊಂಡರು.‌

ಪಿಹೆಚ್ ಡಿ ಚಿನ್ನದ ಪದಕ‌ವಿಜೇತರು :

ದರ್ಶನ್ ಆರ್ 2, ವಿಶಾಲ ರೆಡ್ಡಿ, ಸುಪ್ರಿಯ ಕುಮಾರಸ್ವಾಮಿ ಸಾಲಿಮಠ, ರವಿಚಂದ್ರ, ರೇಷ್ಮಾ ಕೆ ತಲಾ 1 ಪದಕ ಒಟ್ಟು 6 ಚಿನ್ನದ ಪದಕ‌ ಪಡೆದಿರುತ್ತಾರೆ.

ಡಾಕ್ಟರೇಟ್ ಗೌರವ ಪ್ರದಾನ :

ಕೃಷಿಕರು, ಕೃಷಿ ವ್ಯವಸ್ಥೆಗೆ ಬೆಂಬಲವಾಗಿದ್ದ ಹಾಗೂ ಸಮಾಜವಾದಿ ಚಿಂತಕರಾದ ಕಾಗೋಡು ತಿಮ್ಮಪ್ಪನವರು ಇವರಿಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅಭಿವೃದ್ಧಿಪಡಿಸುವಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಗೌರವಿಸಲು ಅವರಿಗೆ ಈ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಘಟಿಕೋತ್ಸವದಲ್ಲಿ ಕುಲಸಚಿವರು, ಬೋಧಕ, ಬೋಧಕೇತರ ಸಿಬ್ಬಂದಿಗಳು, ಪದವೀಧರರು ಹಾಜರಿದ್ದರು.

ಅಡುಗೆ ಭಟ್ಟರ ಪುತ್ರಿಗೆ 4 ಚಿನ್ನದ ಪದಕ
ಶಿವಮೊಗ್ಗ ರವೀಂದ್ರನಗರದ ಗಣಪತಿ ದೇವಸ್ಥಾನದ ಅಡುಗೆ ಭಟ್ಟ ಸುರೇಶ್-ಸುಧಾ ದಂಪತಿ ಪುತ್ರಿ ಎನ್.ಎಸ್.ಸಂಜೀತಾ ಅವರು 2022-23ನೇ ಸಾಲಿನ ನಾಲ್ಕು ಪದಕಕ್ಕೆ ಮುತ್ತಿಟ್ಟರು. ಕಾಶಿಪುರದ ಸಂಜೀತಾ ಅವರು ಬೆಂಗಳೂರಿನ ಜಿಕೆವಿಕೆಯ ಚಿಂತಾಮಣಿ ಕ್ಯಾಂಪಸ್ ನಲ್ಲಿ ಕೃಷಿ ಕೀಟ ಶಾಸ್ತ್ರದಲ್ಲಿ ಎಂಎಸ್ಸಿ ಮಾಡುತ್ತಿದ್ದಾರೆ. ಮುಂದೆ ಪಿಎಚ್ ಡಿ ಮಾಡುವ ಗುರಿ ಹೊಂದಿದ್ದಾರೆ. ರೈತರಿಗೆ ಒಳ್ಳೆಯದನ್ನು ಮಾಡುವ ಗುರಿ ಹೊಂದಿದ್ದಾರೆ.

ಕೃಷಿಕರ ಮಗಳಿಗೆ ಮೂರು ಚಿನ್ನದ ಪದಕ
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಗೌಡರಗೆರೆಯ ಜಿ.ಎಸ್.ಪೂರ್ಣಿಮಾ 2023-24ನೇ ಸಾಲಿನಲ್ಲಿ ಮೂರು ಚಿನ್ನದ ಪದಕ ಪಡೆದಿದ್ದಾರೆ. ಜಿ.ಪಿ.ಹನುಮಂತ-ಎಲ್‌.ಆರ್.ರಾಜೇಶ್ವರಿ ದಂಪತಿ ಪುತ್ರಿಯಾಗಿದ್ದು ಜೆನಿಟಿಕ್ ಆ್ಯಂಡ್ ಪ್ಲ್ಯಾನ್ ಬೀಡಿಂಗ್ ವಿಷಯದಲ್ಲಿ ಎಂಎಸ್ಸಿ ಮಾಡುತ್ತಿದ್ದಾರೆ. ಸಂಶೋಧನೆಯಲ್ಲಿ ಮುಂದುವರಿಯುವ ಇಂಗಿತವನ್ನು ವ್ಯಕ್ತಪಡಿಸಿದರು. ಇತ್ತೀಚೆಗೆ ಒಂದು ತಿಂಗಳು ಸಂಶೋಧನೆಗಾಗಿ ಬ್ಯಾಂಕಾಕ್ ಗೂ ಹೋಗಿ ಅಧ್ಯಯನ ಮಾಡಿಕೊಂಡು ಬಂದಿದ್ದಾರೆ.

Leave a Comment