ಚಿಕ್ಕಮಗಳೂರು ; ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ ಘಟನೆ ತಾಲೂಕಿನ ಕುರುಬರಹಳ್ಳಿಯಲ್ಲಿ ಭಾನುವಾರ ನಡೆದಿದೆ.
ನಾಗಮ್ಮ (65) ಸಿಡಿಲಿಗೆ ಬಲಿಯಾದ ಮಹಿಳೆ. ಬೇಲೂರು ಮೂಲದ ನಾಗಮ್ಮ ಮಗಳ ಮನೆಯಲ್ಲಿ ಶುಂಠಿ ನಾಟಿ ಮಾಡಲು ಬಂದಿದ್ದ ವೇಳೆ ಸಿಡಿಲು ಬಡಿದು ನಾಗಮ್ಮ ಸಾವನ್ನಪ್ಪಿದ್ದಾರೆ.
ಶುಂಠಿ ನಾಟಿ ಮಾಡುವ ಕೆಲಸ ಇದ್ದಿದ್ದರಿಂದ ನಾಗಮ್ಮ ದಂಪತಿಗಳನ್ನು ಅಳಿಯನೇ ಹೋಗಿ ಕರೆದುಕೊಂಡು ಬಂದಿದ್ದರು. ಮಧ್ಯಾಹ್ನ ಮಳೆ ಬರುತ್ತಿದ್ದ ಸಂದರ್ಭ ಹೊಲದಲ್ಲಿ 12 ಮಂದಿ ಕೆಲಸ ಮಾಡುತ್ತಿದ್ದರು. ಈ ವೇಳೆ ನಾಗಮ್ಮ ಅವರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಮೊದಲ ಮಳೆ ಮಹಿಳೆಯನ್ನು ಬಲಿ ಪಡೆದುಕೊಂಡಂತಾಗಿದೆ.

ಇನ್ನೂ ಚಿಕ್ಕಮಗಳೂರು ನಗರ ಮತ್ತು ಸುತ್ತಮುತ್ತ ಭಾನುವಾರ ಮಧ್ಯಾಹ್ನವೇ ಒಂದು ಗಂಟೆಗೂ ಹೆಚ್ಚು ಕಾಲ ಭರ್ಜರಿ ಮಳೆ ಸುರಿದು ತಂಪೆರೆಯಿತು.
ಮಧ್ಯಾಹ್ನ 1.30ರ ವೇಳೆಗೆ ಆರಂಭವಾದ ಮಳೆ, ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಬಿರುಗಾಳಿ ಸಹಿತ ಸುರಿದ ಮಳೆಯಿಂದ ಮರದ ಕೊಂಬೆಗಳು ಕೆಲವೆಡೆ ಮುರಿದು ಬಿದ್ದವು.