ಶಿವಮೊಗ್ಗ ; ಬೈಕ್ ಖರೀದಿಗೆ ಬಂದವನೊಬ್ಬ ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ಸಮೇತ ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಏನಿದು ಘಟನೆ ?
ಹೊಸನಗರದ ಪ್ರಮೋದ್ ಭಟ್ ತಮ್ಮ ಪಲ್ಸರ್ ಬೈಕ್ ಮಾರಾಟ ಮಾಡಲು ನಿರ್ಧರಿಸಿ ಫೇಸ್ಬುಕ್ನಲ್ಲಿ ಮಾಹಿತಿ ಪ್ರಕಟಿಸಿದ್ದರು. ಅವರಿಗೆ ಕರೆ ಮಾಡಿದ ವ್ಯಕ್ತಿ ಬೆಂಗಳೂರಿನ ನಿವಾಸಿ ನವೀನ್ ಎಂದು ಪರಿಚಯಿಸಿಕೊಂಡಿದ್ದ. ಬೈಕಿನ ವಿವರಗಳನ್ನು ಪಡೆದುಕೊಂಡಿದ್ದ. ಮಾ. 30ರಂದು ಶಿವಮೊಗ್ಗಕ್ಕೆ ಬರುವುದಾಗಿ ಆತ ಹೇಳಿದ್ದು, ಪ್ರಮೋದ್ ಭಟ್ ಬೈಕ್ ಸಮೇತ ಶಿವಮೊಗ್ಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದು, ನಿಲ್ದಾಣದ ಎದುರಿನ ಹೋಟೆಲ್ ಬಳಿ ಅವರನ್ನು ಭೇಟಿಯಾದ ನವೀನ್ 1.90 ಲಕ್ಷ ರೂ.ಗೆ ಬೈಕ್ ಖರೀದಿಸುವುದಾಗಿ ಹೇಳಿದ್ದಾನೆ. 70 ಸಾವಿರ ನಗದು ಕೊಡುತ್ತೇನೆ. ಬೈಕ್ ಮೇಲೆ ಇರುವ 1.20 ಲಕ್ಷ ರೂ. ಸಾಲವನ್ನು ತೀರಿಸುತ್ತೇನೆ ಎಂದು ತಿಳಿಸಿದ್ದ.
ಮಧ್ಯಾಹ್ನ 12 ಗಂಟೆಗೆ ಟ್ರಯಲ್ ನೋಡುವುದಾಗಿ ಬೈಕ್ ತೆಗೆದುಕೊಂಡು ಹೋದ ಆತ ಪರಾರಿಯಾಗಿದ್ದಾನೆ. ಮಧ್ಯಾಹ್ನ 2 ಗಂಟೆಗೆ ಫೋನ್ ಕರೆ ಸ್ವೀಕರಿಸಿದ್ದಾನೆ ನಂತರ ಫೋನ್ ಕರೆ ಸ್ವೀಕರಿಸದೆ ನಾಪತ್ತೆಯಾಗಿದ್ದಾನೆ.
ಬೈಕ್ ಕಳೆದುಕೊಂಡ ಪ್ರಮೋದ್ ಭಟ್ ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.