ಶಿವಮೊಗ್ಗ ; ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಸೋಮವಾರದಂದು ನಗರದ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದರು.
ಶಿವಮೊಗ್ಗ-ಭದ್ರಾವತಿ ಮೀಟರ್ ಟ್ಯಾಕ್ಸಿ ಅಸೋಸಿಯೇಷನ್‌ನವರು ತಮ್ಮ ಟ್ಯಾಕ್ಸಿಗಳಿಗೆ ಜಿಪಿಎಸ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಕೆ ಮಾಡಬೇಕೆಂಬ ಆದೇಶವಿರುತ್ತದೆ. ಈ ವ್ಯವಸ್ಥೆ ಇಲ್ಲದಿದ್ದಲ್ಲಿ ಆರ್‌ಟಿಓ ಕಚೇರಿಯಿಂದ ಎಫ್‌ಸಿ ಮಾಡಿಸಲು ಬರುವುದಿಲ್ಲ. ಆದರೆ ಈ ವ್ಯವಸ್ಥೆ ಅಳವಡಿಕೆಯಿಂದ ಟ್ಯಾಕ್ಸಿ ನಡೆಸುವವರಿಗೆ ಅಧಿಕ ಖರ್ಚು ಬರುತ್ತದೆ. ಹಾಗೂ ಈ ಟ್ಯಾಕ್ಸಿಗಳು ಶಿವಮೊಗ್ಗ ಮತ್ತು ಭದ್ರಾವತಿ ನಡುವೆ ಮಾತ್ರ ಕಾರ್ಯಾಚರಣೆ ಮಾಡುತ್ತಿರುವ ಕಾರಣ ಮತ್ತು ಅಧಿಕ ಖರ್ಚು ಆಗುವುದರಿಂದ ಸದರಿ ವ್ಯವಸ್ಥೆಯನ್ನು ರದ್ದುಪಡಿಸಿ ಅನುಕೂಲ ಮಾಡಿಕೊಡಬೇಕೆಂದು ಸಚಿವರಿಗೆ ಮನವಿ ಸಲ್ಲಿಸಿದರು.
ಪ್ರಿಯಾಂಕ ಬಡಾವಣೆ ನಿವಾಸಿಗಳ ಹಿತರಕ್ಷಣಾ ವೇದಿಕೆಯ ಸದಸ್ಯರು ಪ್ರಿಯಾಂಕ ಬಡಾವಣೆಯಲ್ಲಿ ಉದ್ದ ಮತ್ತು ಅಡ್ಡ ರಸ್ತೆಗೆ ಹೊಸದಾಗಿ ಡಾಂಬರೀಕರಣ ಮಾಡಿಸಿಕೊಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ತೆಲುಗು ಅರುಂಧತಿ ಆದಿಕರ್ನಾಟಕ ಸಮಾಜದವರು ನಗರದ 27 ನೇ ವಾರ್ಡಿನಲ್ಲಿ ಅರ್ಧಕ್ಕೆ ನಿಲ್ಲಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ಪೂರ್ಣಗೊಳಿಸಲು ರೂ.50 ಲಕ್ಷ ಅನುದಾನವನ್ನು ಮಂಜೂರು ಮಾಡಬೇಕೆಂದು ಕೋರಿದರು.
ಬನಶಂಕರಿ ಬಡಾವಣೆಯ ಆಂಜನೇಯ ಸಮಿತಿಯವರು ದೇವಸ್ಥಾನ ನಿರ್ಮಿಸಲು ಅನುದಾನ ನೀಡುವಂತೆ ಕೋರಿದರು. ಹಾಗೂ ಉದ್ಯೋಗ ಒದಗಿಸುವಂತೆ ಕೋರಿ ಇಬ್ಬರು ಮಹಿಳೆಯರು ಅರ್ಜಿ ನೀಡಿದರು. ಸಚಿವರು 10 ಕ್ಕೂ ಅಧಿಕ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದರು.
ಎಸ್‌ಎಸ್‌ಎಲ್‌ಸಿ-ಉತ್ತಮ ಫಲಿತಾಂಶಕ್ಕೆ ಸಹಕರಿಸಿದವರಿಗೆ ಅಭಿನಂದನೆ :
ಇದೇ ವೇಳೆ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆ ರಾಜ್ಯದಲ್ಲಿ 4ನೇ ಸ್ಥಾನ ಪಡೆದಿದ್ದು, ಜಿಲ್ಲೆಯ ಗೋಪಾಳದ ರಾಮಕೃಷ್ಣ ವಿದ್ಯಾಲಯದ ನಿತ್ಯ ಎಂ ಕುಲಕರ್ಣಿ, ಪ್ರಿಯದರ್ಶಿನಿ ಶಾಲೆಯ ನಮನ ಹಾಗೂ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯ ಸಹಿಷ್ಣು ಎಂಬ ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
2024-25 ರ ಪರೀಕ್ಷೆ 1ರ ಫಲಿತಾಂಶವು ಕಳೆದ ಸಾಲಿಗಿಂತ ಶೇ.8.5 ರಷ್ಟು ಅಧಿಕವಾಗಿದೆ. ಈ ವರ್ಷ ಶೇ.75 ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆ(ಶೇ.60) ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. ಕಳೆದ ವರ್ಷ ಶೇ.54 ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದರು. ಈ ಬಾರಿ ಶೇ.75 ರಷ್ಟು ಆರ್‌ಟಿಇ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಉತ್ತಮ ಫಲಿತಾಂಶ ಬರಲು ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಯನ್ನು ಈ ಬಾರಿ ತರಲಾಗಿತ್ತು. ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲಿ ಸಂಜೆ ಹೊತ್ತು ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗಿತ್ತು. ಅಣಕು ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲಾಗಿತ್ತು. ಜಿಲ್ಲಾಡಳಿತ, ಜಿ.ಪಂ, ಇತರೆ ಇಲಾಖೆಗಳು ಹಾಗೂ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳ ಪರಿಶ್ರಮದಿಂದ ಉತ್ತಮ ಫಲಿತಾಂಶ ಬಂದಿದ್ದು, ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.
ಗ್ರಾಮೀಣ, ಹಿಂದುಳಿದ, ರೈತರು ಮತ್ತು ಬಡ ಮಕ್ಕಳಿಗೆ ಅನುಕೂಲವಾಗಲೆಂದು ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ ಕಟ್ಟಲು ಯಾವುದೇ ಶುಲ್ಕವನ್ನು ವಿಧಿಸಿಲ್ಲ. ಜೊತೆಗೆ ಆನ್‌ಲೈನ್ ನಲ್ಲೇ ತಕ್ಷಣ ಪರೀಕ್ಷೆ ತೆಗೆದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು ಇದು ಅತ್ಯಂತ ಯಶಸ್ಸು ಕಂಡಿದೆ.
ಪಿಯುಸಿಯಲ್ಲಿ ಕಳೆದ ಬಾರಿ 36 ಸಾವಿರ ವಿದ್ಯಾರ್ಥಿಗಳು ಇಂಪ್ರೂವ್‌ಮೆಂಟ್‌ಗೆ ನೋಂದಣಿ ಮಾಡಿಸಿದ್ದರೆ ಈ ಬಾರಿ 79 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈವರೆಗೆ 64,600 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಎರಡನೇ ಪರೀಕ್ಷೆಗೆ ದಾಖಲಾಗಿದ್ದು, ಮೂರು ಪರೀಕ್ಷೆಗಳ ಸೂತ್ರ ಯಶಸ್ಸು ಕಂಡಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಂದೇ ಪರೀಕ್ಷೆ-2 ಬರೆಯಲು ನೋಂದಣಿ ಆರಂಭಿಸಿದ್ದು ಅಂದೇ ಪರೀಕ್ಷೆ 2 ಮತ್ತು ಪರೀಕ್ಷೆ 3 ರ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ದಿನಾಂಕ: 26-05-2025 ರಿಂದ 02-06-2025 ಹಾಗೂ ಪರೀಕ್ಷೆ-3 ದಿ: 23-06-2025 ರಿಂದ 30-06-2025 ರವರೆಗೆ ನಡೆಯಲಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಿಗೆ ಸುಮಾರು 11 ಸಾವಿರ ಹಾಗೂ ಅನುದಾನಿಕ ಶಾಲೆಗಳಿಗೆ 6500 ಸೇರಿದಂತೆ ಸುಮಾರು 17 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಈ ವೇಳೆ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ತಾಲ್ಲೂಕು ಅಧ್ಯಕ್ಷ ಹೆಚ್.ಎಂ ಮಧು, ಮಾಜಿ ವಿಧಾನಪರಿಷತ್ ಶಾಸಕ ಆರ್.ಪ್ರಸನ್ನಕುಮಾರ್, ಮುಖಂಡರಾದ ಕಲಗೋಡು ರತ್ನಾಕರ ಸೇರಿದಂತೆ ಇತರೆ ಮುಖಂಡರು ಪಾಲ್ಗೊಂಡಿದ್ದರು.