ಹೊಸನಗರ ; ಕೌಟುಂಬಿಕ ಕಲಹಕ್ಕೆ ಹೊಡೆದಾಡಿಕೊಂಡು ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ತಾಲೂಕಿನ ನಿಟ್ಟೂರು ಸಮೀಪದ ಕರ್ಕಮುಡಿಯಲ್ಲಿ ಭಾನುವಾರ ನಡೆದಿದೆ.
ದೇವಿಚಂದ್ರ (52) ಮೃತ ದುರ್ದೈವಿ. ದೇವಿಚಂದ್ರನ ಬಾವ ಓಂಕಾರ್ ಮನೆಯಲ್ಲಿ ನಾಗಚೌಡಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮವಿತ್ತು. ಪೂಜೆಗೆ ಅಕ್ಕನ ಗಂಡ ದೇವಿಚಂದ್ರ ಕೂಡ ಬಂದಿದ್ದರು. ಮೊದಲಿನಿಂದಲೂ ಒಂದಷ್ಟು ವೈಮನಸ್ಸು ಇದ್ದ ಕಾರಣ ಓಂಕಾರ್ ಮತ್ತು ದೇವಿಚಂದ್ರನ ನಡುವೆ ಮಾತಿನ ಗಲಾಟೆ ನಡೆದಿದೆ. ಈ ವೇಳೆ ದೇವಿಚಂದ್ರನ ಮಗ (ದೇವಿಚಂದ್ರ ಹೆಂಡತಿಯ ಮೊದಲನೇ ಗಂಡನ ಮಗ) ಯಶವಂತ್ ಕೂಡ ಗಲಾಟೆಯಲ್ಲಿ ಓಂಕಾರ್ ಗೆ ಸಾಥ್ ನೀಡಿದ್ದ. ಗಲಾಟೆ ವಿಕೋಪಕ್ಕೆ ಹೋಗಿ ಅಲ್ಲೇ ಇದ್ದ ಕಟ್ಟಿಗೆ ತುಂಡಿನಿಂದ ದೇವಿಚಂದ್ರನ ತಲೆಗೆ ಹೊಡೆದ ಕಾರಣ ತೀವ್ರ ರಕ್ತಸ್ರಾವಗೊಂಡ ದೇವಿಚಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತ ದೇವಿಚಂದ್ರ ಮತ್ತು ಬಾವ ಓಂಕಾರ ನಡುವೆ ಹಿಂದಿನಿಂದಲೂ ಸಣ್ಣಪುಟ್ಟ ವೈಷಮ್ಯ ಇತ್ತು. ಅಲ್ಲದೇ ದೇವಿಚಂದ್ರ ಪತ್ನಿಯ ಮೊದಲನೇ ಗಂಡನ ಮಗ ಯಶವಂತನ ನಡುವೆ ಕೂಡ ದೇವಿಚಂದ್ರನ ಸಂಬಂಧ ಕೂಡ ಅಷ್ಟಾಗಿ ಉತ್ತಮವಾಗಿರಲಿಲ್ಲ ಎನ್ನಲಾಗಿದೆ. ಈ ಕಲಹ ಇದು ಪೂಜಾ ದಿನದಂದು ತಾರಕಕ್ಕೆ ಹೋಗಿತ್ತು. ಅವಾಚ್ಯ ಶಬ್ಧಗಳ ನಿಂದನೆ ಶುರುವಾಗಿದ್ದು, ಗಲಾಟೆ ಹೊಡೆದಾಟಕ್ಕೆ ತಿರುಗಿ, ಕಟ್ಟಿಗೆ ತುಂಡಿನಿಂದ ದೇವಿಚಂದ್ರ ತಲೆಗೆ ಹೊಡೆಯಲಾಗಿದೆ. ಬಲವಾದ ಪೆಟ್ಟು ಬಿದ್ದ ಕಾರಣ ದೇವಿಚಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಾಹಿತಿ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಠಾಣೆ ಪಿಎಸ್‌ಐ ಕುಮಾರ್ ಮತ್ತು ಅಮೀರ್ ಜಾನ್, ಪ್ರವೀಣ್, ವಿಶ್ವನಾಥ ಮತ್ತು ಪೊಲೀಸರ ತಂಡ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಸಿಪಿಐ ಗುರಣ್ಣ ಹೆಬ್ಬಾಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.