ಶಿವಮೊಗ್ಗ ; ನಗರದ ನಾರಾಯಣ ಹೃದಯಾಲಯದಲ್ಲಿ ಹೊಟ್ಟೆ ನೋವಿನ ಚಿಕಿತ್ಸೆಗೆ ದಾಖಲಾಗಿದ್ದ ಭದ್ರಾವತಿಯ ರೋಗಿಯೊಬ್ಬರಿಗೆ ಅಗತ್ಯವಾಗಿ ಬೇಕಾಗಿದ್ದ ವಿರಾಳತಿ ವಿರಳ ʼಬಾಂಬೆ ಬಡ್ಲ್ʼ ಕೊಡಲು ರಕ್ತದಾನಿಯೊಬ್ಬರು ದೂರದ ಗಂಗಾವತಿಯಿಂದ ಶಿವಮೊಗ್ಗಕ್ಕೆ ಬಂದು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರಲ್ಲದೆ, ಇವರ ಈ ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.ಶಿವಮೊಗ್ಗದ ಯಶಸ್ಸಿ ರಕ್ತದಾನಿಗಳ ಬಳಗ ಮತ್ತು ನಾರಾಯಣ ಹೃದಯಾಲಯದ ಸಿಬ್ಬಂದಿ ಧನ್ಯವಾದ ಸಲ್ಲಿಸಿದ್ದಾರೆ.
ತೀರಾ ಅಪರೂಪವೇ ಎನ್ನುವ ಬಾಂಬೆ ರಕ್ತದ ಗುಂಪು (ಎಚ್‌ಎಚ್)ಹೊಂದಿರುವವರಿಗೆ ತುರ್ತು ಸಂದರ್ಭಗಳಲ್ಲಿ ರಕ್ತ ಹೊಂದಿಸುವುದು ಕುಟುಂಬದವರು ಮತ್ತು ಆಸ್ಪತ್ರೆಯವರ ಪಾಲಿಗೆ ದೊಡ್ಡ ಸವಾಲು. ಯಾಕೆಂದರೆ ವಿಶ್ವಮಟ್ಟದಲ್ಲಿ ಕೋಟಿಗೊಬ್ಬರು. ಭಾರತದಲ್ಲಿ 10 ಲಕ್ಷಕ್ಕೆ ಒಬ್ಬರು ಬಾಂಬೆ ರಕ್ತದ ಗುಂಪು ಹೊಂದಿದವರಿದ್ದಾರೆನ್ನುವುದು ಮಾಹಿತಿ. ಇಂತಹ ರಕ್ತದ ಗುಂಪು ಹೊಂದಿದ್ದ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದ ನಿವಾಸಿ ಉಮೇಶ್ ಎನ್ನುವವರು ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರ ನಿವಾಸಿ ಕೊಂಗಮ್ಮ ಎಂಬುವವರಿಗೆ ರಕ್ತದಾನ ಮಾಡಿ, ಅವರ ಜೀವ ಕಾಪಾಡಿದ್ದಾರೆ.
ಭದ್ರಾವತಿ ತಾಲೂಕು ಹೊಸ ಸಿದ್ದಾಪುರ ನಿವಾಸಿ ಕೊಂಗಮ್ಮ ಎನ್ನುವವರು ಹೊಟ್ಟೆಯ ನೋವಿನ ಕಾರಣಕ್ಕೆ ಕೆಲವು ದಿನಗಳ ಹಿಂದೆ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರ ಹೊಟ್ಟೆಯಲ್ಲಿ ಗಡ್ಡೆ ಬೆಳೆದು, ಅದನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರ ತೆಗೆಯಬೇಕಾಗಿತ್ತು. ಆದರೆ ಅಗತ್ಯ ಶಸ್ತ್ರ ಚಿಕಿತ್ಸೆ ರಕ್ತದ ಅವಶ್ಯಕತೆಯಿತ್ತು. ಆದರೆ ಕೊಂಗಮ್ಮ ಅವರದ್ದು ಬಾಂಬೆ ರಕ್ತದ ಗುಂಪು ಆಗಿದ್ದರಿಂದ ಅದನ್ನು ಹೊಂದಿಸುವುದು ಆಸ್ಪತ್ರೆಯ ವೈದ್ಯರಿಗೆ ಸವಾಲಾಗಿ ಪರಿಣಮಿಸಿತು. ಕೊನೆಗೆ ವೈದ್ಯರು ದಾರಿ ಕಾಣದೆ, ʼರೋಗಿಯ ಶಸ್ತ್ರ ಚಿಕಿತ್ಸೆಗೆ ಬಾಂಬೆ ರಕ್ತದ ಅವಶ್ಯಕತೆಯಿದೆ. ಈ ತರಹದ ರಕ್ತದ ಗುಂಪು ಇಲ್ಲಿ ಲಭ್ಯವಿಲ್ಲ, ಎಲ್ಲಾದರೂ ಸಿಕ್ಕರೆ ಹುಡುಕಿ ತಂದರೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದುʼ ಎಂದು ಕೊಂಗಮ್ಮಳ ಕುಟುಂಬದವರಿಗೆ ಹೇಳಿದರು. ಅಲ್ಲಿಂದ ಬಾಂಬೆ ರಕ್ತದ ಹುಡುಕಾಟ ಶುರುವಾಯಿತು.
ಶಿವಮೊಗ್ಗದ ಯಾವುದೇ ರಕ್ತ ಸಂಗ್ರಹ ಕೇಂದ್ರಗಳಲ್ಲೂ ಬಾಂಬೆ ರಕ್ತ ಸಿಗಲಿಲ್ಲ, ಕೊನೆಗೆ ಕೊಂಗಮ್ಮ ಕುಟುಂಬದವರು ಆಸ್ಪತ್ರೆಯವರ ಮೂಲಕ ಶಿವಮೊಗ್ಗದ ಯಶಸ್ವಿ ರಕ್ತದಾನಿ ಬಳಗ ಸಂಪರ್ಕ ಮಾಡಿದ್ದರು. ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಮಗೆ ಸಂಪರ್ಕ ಇರುವ ಎಲ್ಲ ರಕ್ತದಾನಿಗಳಿಗೂ ಮಾಹಿತಿ ಕೊಟ್ಟರು. ಯಾರಾದರೂ ರಕ್ತದಾನ ಮಾಡುವವರಿದ್ದರೆ, ತಿಳಿಸಿ ಎಂದು ಮನವಿ ಮಾಡಿದರು. ಆ ಮೂಲಕವೇ ಗಂಗಾವತಿ ತಾಲೂಕಿನ ಹೆಬ್ಬಾಳದ ನಿವಾಸಿ ಉಮೇಶ್ ಅವರು ಶಿವಮೊಗ್ಗದ ಯಶಸ್ವಿ ರಕ್ತದಾನಿ ಬಳಗದ ರಂಜನ್ ಅವರನ್ನು ಸಂಪರ್ಕಿಸಿ, ತಾವು ಬಾಂಬೆ ರಕ್ತದ ಗುಂಪಿನವನಾಗಿದ್ದು, ರೋಗಿಗೆ ರಕ್ತ ಕೊಡುವುದಾಗಿ ತಿಳಿಸಿದರು. ಅಲ್ಲದೆ ರಕ್ತದಾನಕ್ಕೆ ನಿಗದಿಯಾಗಿದ್ದ ದಿವಸಕ್ಕೆ ತಾವು ಅಲ್ಲಿಂದ ಶಿವಮೊಗ್ಗಕ್ಕೆ ಬರುವುದಾಗಿಯೂ ಭರವಸೆ ಕೊಟ್ಟರು. ಆಗ ರೋಗಿ ಕೊಂಗಮ್ಮಳ ಕುಟುಂಬದವರಿಗೆ ಬದುಕಿನ ಭರವಸೆ ಮೂಡಿತು.

ರಕ್ತದ ದಾನಕ್ಕೆ ನಂಜಪ್ಪ ಲೈಫ್ ಕೇರ್ ನಲ್ಲಿ ಅವತ್ತು ವ್ಯವಸ್ಥೆ ಮಾಡಲಾಗಿತ್ತು. ಆ ಪ್ರಕಾರ ದೂರದ ಗಂಗಾವತಿಯಿಂದ ಉಮೇಶ್ ಅವರು ಕೆಎಸ್ ಆರ್ ಟಿಸಿ ಬಸ್ಸಿನಲ್ಲಿಯೇ ಪ್ರಯಾಣ ಮಾಡಿ ಬಂದರು. ಶಿವಮೊಗ್ಗದ ಯಶಸ್ವಿ ರಕ್ತದಾನಿ ಬಳಗದವರ ಮೂಲಕ ಉಮೇಶ್ ಅವರು ನಂಜಪ್ಪ ಲೈಫ್ ಕೇರ್ ಗೆ ತೆರಳಿ ರಕ್ತದಾನ ಮಾಡಿದರು. ತಕ್ಷಣವೇ ಅದನ್ನು ನಾರಾಯಣ ಹೃದಯಾಲಯದಲ್ಲಿದ್ದ ರೋಗಿ ಕೊಂಗಮ್ಮ ಅವರಿಗೆ ಹಾಕಿ, ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸುವ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿದರು. ಈಗ ಆರೋಗ್ಯವಾಗಿರುವ ಕೊಂಗಮ್ಮ, ರಕ್ತದಾನ ಮಾಡುವ ಮೂಲಕ ತನ್ನನ್ನು ಬದುಕಿಸಿದ ಉಮೇಶ್ ಅವರಿಗೆ ಧನ್ಯವಾದ ಹೇಳಿದರು.
ಸಾಮಾನ್ಯವಾಗಿ ಎ,ಬಿ,ಎಬಿ,ಓ ಪಾಸಿಟಿವ್ ಇಲ್ಲವೆ ಎ,ಬಿ,ಎಬಿ ನೆಗೆಟಿವ್ ರಕ್ತದ ಗುಂಪುಗಳನ್ನು ಹೊಂದಿದವರು ಸಿಗುತ್ತಾರೆ. ಆದರೆ ಬಾಂಬೆ ರಕ್ತದ ಗುಂಪಿನವರು ಸಿಗುವುದು ವಿರಳಾತಿ ವಿರಳ, ಭಾರತದಲ್ಲಿ 10 ಲಕ್ಷಕ್ಕೆ ಒಬ್ಬರು ಇಂತಹ ರಕ್ತದ ಗುಂಪಿನವರು ಇರುತ್ತಾರೆನ್ನಲಾಗಿದೆ. ಈ ರೀತಿಯ ರಕ್ತದ ಅವಶ್ಯಕತೆಯ ಅನಿವಾರ್ಯತೆಯಲ್ಲಿ ನಾವು ಹುಡುಕಾಟ ನಡೆಸಿದಾಗ ಸಿಕ್ಕವರು ಗಂಗಾವತಿಯ ಉಮೇಶ್ ಅವರು, ಅವರಿಂದ ಈಗ ಒಂದು ಜೀವ ಉಳಿದಿದೆ. ಇದು ಬಹುದೊಡ್ಡ ಕೆಲಸ. ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಕಮ್ಮಿ.
– ಎ.ಸಿ. ರಂಜನ್, ಶಿವಮೊಗ್ಗ ಯಶಸ್ವಿ ರಕ್ತದಾನಿಗಳ ಬಳಗ
ಶಿವಮೊಗ್ಗ ಯಶಸ್ವಿ ರಕ್ತದಾನಿಗಳ ಬಳಗದ ಮೂಲಕ ನನಗೆ ಮಾಹಿತಿ ಗೊತ್ತಾಯಿತು. ತಕ್ಷಣವೇ ರಂಜನ್ ಅವರನ್ನು ಸಂಪರ್ಕ ಮಾಡಿ, ನಾನು ರೋಗಿಗೆ ರಕ್ತ ಕೊಡುವುದಾಗಿ ಹೇಳಿದೆ. ತುಂಬಾ ಅಪರೂಪವೆ ಆಗಿರುವ ಬಾಂಬೆ ರಕ್ತದ ಬೇಡಿಕೆಯ ಹುಡುಕಾಟದ ಪರಿಸ್ಥಿತಿ ನನಗೆ ಗೊತ್ತಿದೆ. ಯಾಕೆಂದರೆ ನಾನು ಈಗಾಗಲೇ 9 ಬಾರಿ ರಕ್ತದಾನ ಮಾಡಿದ್ದೇನೆ. ರಕ್ತದ ಅಗತ್ಯವಿರುವವರು ಹುಡುಕಾಟದ ಪರಿಸ್ಥಿತಿ ಅರಿತಿದ್ದೇನೆ, ಹಾಗಾಗಿ ಮಾಹಿತಿ ಸಿಕ್ಕ ತಕ್ಷಣವೇ ರಕ್ತ ಕೊಡಲು ಒಪ್ಪಿ, ಇಲ್ಲಿಗೆ ಬಂದು ರಕ್ತದಾನ ಮಾಡಿದ್ದೇನೆ.
– ಉಮೇಶ್ ಬಿ., ಗಂಗಾವತಿ ತಾಲೂಕು ಹೆಬ್ಬಾಳದ ರಕ್ತದಾನಿ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





