HOSANAGARA ; ರಾಜ್ಯದ ಅಡಿಕೆ ಬೆಳೆಗಾರರು ಹಲವಾರು ಕಾರಣಗಳಿಂದ ವ್ಯಾಪಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟವನ್ನು ಚುನಾಯಿತ ಜನಪ್ರತಿನಿಧಿಗಳಿಗೆ ಮನದಟ್ಟು ಮಾಡಿಕೊಡುವ ಮೂಲಕ ಸಮಸ್ಯೆಗಳಿಗೆ ಅಂತ್ಯ ಹಾಡಬೇಕಿದ್ದು, ಈ ಕಾರಣಕ್ಕೆ ಸಾಗರ ಪ್ರಾಂತ್ಯದ ಅಡಿಕೆ ಬೆಳೆಗಾರರ ಸಂಘವು ಇದೇ ಡಿಸೆಂಬರ್ 6ರಂದು ಸಾಗರದ ಸಂತೆ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ ಎಂದು ಅಡಿಕೆ ಬೆಳೆಗಾರರ ಸಂಘದ ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.
ಈ ಸಮಾವೇಶದಲ್ಲಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಹಳದಿ ರೋಗ, ಎಲೆಚುಕ್ಕಿ ರೋಗ, ಕೊಳೆರೋಗ, ಬೇರುಹುಳ ಕುರಿತು ಜನಪ್ರತಿನಿಧಿಗಳಿಗೆ ಅರಿವು, ಸೊಪ್ಪಿನಬೆಟ್ಟ ಕುರಿತು ಜಾಗೃತಿ, ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ, ಅಡಿಕೆ ಬಳಕೆಯಿಂದ ಕ್ಯಾನ್ಸರ್ ನಂತ ಮಾರಣಾಂತಿಕ ರೋಗ ಹರಡುತ್ತದೆ ಎಂದು ತಪ್ಪು ಮಾಹಿತಿ ಹರಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವುದು ಸಮಾವೇಶದ ಮೂಲ ಉದ್ದೇಶವಾಗಿದೆ ಎಂದರು.
ಕಳೆದ 50 ವರ್ಷಗಳಿಂದ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘವು ಅಡಿಕೆ ಬೆಳೆಗಾರರ ಪರವಾಗಿ ಹಲವಾರು ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತಿದ್ದು, ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಎನ್ನಲಾದ ಅಡಿಕೆಯ ಬಳಕೆ ಕ್ಯಾನ್ಸರ್‌ಕಾರಕ ಎಂಬ ತಪ್ಪು ವರದಿಯನ್ನು ಸಂಘ ತೀವ್ರವಾಗಿ ಖಂಡಿಸಿ, ಅಡಿಕೆ ಬೆಳೆಯನ್ನು ಒಂದು ಸಾಂಪ್ರದಾಯಿಕ ಬೆಳೆ ಎಂದು ಘೋಷಣೆ ಮಾಡಲು ಸರ್ಕಾರದ ಗಮನ ಸೆಳೆಯುವುದು ಈ ಸಮಾವೇಶ ಧ್ಯೇಯವಾಗಿದೆ. ಅಡಿಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಅಲ್ಲದೆ, ಒಂದು ಪೂಜನೀಯ ಸ್ಥಾನಮಾನವಿದೆ. ಈ ಒಂದು ತಪ್ಪು ವರದಿಯ ಹಿಂದೆ ಬಹಳ ದೊಡ್ಡ ಸಿಗರೇಟಿನ ಲಾಭಿ ಇದೆ ಎಂದು ಅವರು ಕಿಡಿಕಾರಿದರು.
ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದ ಸಂಗತಿ ಈಗಾಗಲೇ ಸುಪ್ರಿಂಕೋರ್ಟ್ ಮೆಟ್ಟಿಲೇರಿದೆ. ಈ ಸಂಬಂಧ ಕೇಂದ್ರ ಸರ್ಕಾರ ಅಡಿಕೆ ಸೇವನೆ ಆರೋಗ್ಯಕ್ಕೆ ಮಾರಕವಲ್ಲ ಎಂದು ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸುವ ಮೂಲಕ ಅಡಿಕೆ ಬೆಳಗಾರರ ಪರ ನಿಂತಿದೆ. ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಳೆಗಾರ ಆರ್ಥಿಕ ಸಬಲತೆ ಹೊಂದಲು ಅಡಿಕೆ ಬೆಲೆಯಲ್ಲಿನ ಸ್ಥಿರ ಧಾರಣೆ ಕಾರಣವಾಗಿದೆ ಎಂದರು.
ಅಡಿಕೆ ಬೆಳೆ ನಿಷೇಧ ಮಾಡಿದಲ್ಲಿ ರಾಜ್ಯದ ಎಳೆಂಟು ಜಿಲ್ಲೆಯ ಸಾವಿರಾರು ಬೆಳೆಗಾರರ ಬದುಕಿನ ಮೇಲೆ ಆರ್ಥಿಕ ಪರಿಣಾಮ ಬೀರಲಿದೆ. ಆ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಬೆಳೆ ಕುರಿತು ನೀಡಿದ ಸುಳ್ಳು ವರದಿಯನ್ನು ಕೇಂದ್ರ ಸರ್ಕಾರದ ಸಚಿವರಿಗೆ ಮನದಟ್ಟು ಮಾಡಿಕೊಡಲು ಸಂಘ ಈ ಸಮಾವೇಶ ಹಮ್ಮಿಕೊಂಡಿದೆ. ಡಿ.6 ಸಮಾವೇಶವನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಉದ್ಘಾಟಿಸಲಿದ್ದು, ಸಂಸದ ಬಿ.ವೈ.ರಾಘವೇಂದ್ರ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಶಾಸಕ ಗೋಪಾಲಕೃಷ್ಣ ಬೇಳೂರು ಕಾಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸನ್ಮಾನ ಸ್ವೀಕರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತರು ಜಿ. ಭೀಮೇಶ್ವರ ಜೋಷಿ, ಮಾಜಿ ಸಚಿವ ಹರತಾಳು ಹಾಲಪ್ಪ, ಮಂಗಳೂರು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಜಿಲ್ಲಾ ಮಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಸಾಗರ ದಲಾಲರ ಸಂಘದ ಮೋಹನ್ ಗೌಡ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದಾರೆ.
ಸಂಜೆ ಸಮಾರೋಪ ಸಮಾರಂಭದಲ್ಲಿ ತೋಟಗಾರಿಕೆ ಸಚಿವ ಎಸ್. ಮಲ್ಲಿಕಾರ್ಜುನ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಎಂಎಡಿಬಿ ಅಧ್ಯಕ್ಷ ಡಾ. ಆರ್.ಎನ್. ಮಂಜುನಾಥಗೌಡ, ಶಿಮುಲ್ ಅಧ್ಯಕ್ಷ ವಿದ್ಯಾಧರ್, ಆಪ್ಸ್ಕೋಸ್ ಅಧ್ಯಕ್ಷ ಇಂದೂಧರ ಗೌಡ, ತೋಟಗರ‍್ಸ್ ಸೊಸೈಟಿ ಅಧ್ಯಕ್ಷ ಕೆ.ಸಿ.ದೇವಪ್ಪ, ಅಡಿಕೆ ವ್ಯಾಪಾರಸ್ಥ ಸಂಘದ ಅಧ್ಯಕ್ಷ ನಿರಂಜನ ಕೋರಿ ಭಾಗವಹಿಸಿಲಿದ್ದಾರೆ.
ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಭಾಗವಹಿಸುವ ಮೂಲಕ ಯಶಸ್ವಿಗೆ ಕಾರಣರಾಗುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಆಪ್ಸ್ಕೋಸ್ ಮಾಜಿ ಅಧ್ಯಕ್ಷ ಗಿರಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಅಡಿಕೆ ಬೆಳೆಗಾರರ ಸಂಘದ ಉಪಾಧ್ಯಕ್ಷ ದೊಂಬೆಕೊಪ್ಪ ಬಸವರಾಜು, ಎರಗಿ ಉಮೇಶ್, ನಿರ್ದೇಶಕ ಶ್ರೀಕಾಂತ್, ಶಿವಾನಂದ್, ಎ.ವಿ.ಮಲ್ಲಿಕಾರ್ಜುನ್, ಯುವರಾಜ್ ಮೊದಲಾದವರು ಇದ್ದರು.