SHIVAMOGGA ; ರೈಲ್ವೆ ನಿಲ್ದಾಣದಲ್ಲಿ ಚಿನ್ನಾಭರಣ ಕಳವುಗೈದು ತಮ್ಮೂರಿಗೆ ಹೋಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಶಿವಮೊಗ್ಗ ರೈಲ್ವೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಬಿಟ್ಯಾನ ತಾಂಡಾ ನಿವಾಸಿ ಧರ್ಮನಾಯ್ಕ(45)
ಬಂಧಿತ ಆರೋಪಿ. ಡಿ.23ರಂದು ಬೆಂಗಳೂರು- ತಾಳಗುಪ್ಪ ರೈಲು ಆನಂದಪುರ ನಿಲ್ದಾಣಕ್ಕೆ ತಲುಪಿದಾಗ ಒಳಗೆ ಕುಳಿತಿದ್ದ ಮಹಿಳೆಯೊಬ್ಬರ ಕೊರಳಿನಲ್ಲಿದ್ದ 3 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳವು ಮಾಡಿ ಈತ ಪರಾರಿಯಾಗಿದ್ದ. ಶಿವಮೊಗ್ಗ ರೈಲ್ವೆ ನಿಲ್ದಾಣದ ಪಿಐ ಹಾಗೂ ಪೋಸ್ಟ್ ಕಮಾಂಡರ್ ಬಿ.ಕೆ.ಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡು ಬಂಧಿಸಿ, ಸಾಗರ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿ, ವಿಚಾರಣೆಗಾಗಿ ಐದು ದಿನ ಪೊಲೀಸರ ವಶಕ್ಕೆ ಪಡೆಯಲಾಗಿದೆ.
ಮಾಂಗಲ್ಯ ಸರ ಕಳವು ಬಳಿಕ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಧರ್ಮನಾಯ್ಕನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಆಗ 60 ಗ್ರಾಂ ಚಿನ್ನದ ಮಾಂಗಲ್ಯ ಸರ ಸಿಕ್ಕಿದೆ. ಅದರ ಬಗ್ಗೆ ವಿಚಾರಿಸಿದಾಗ ಅದು ಆನಂದಪುರದಲ್ಲಿ ದೋಚಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಚಾರಣೆ ಸಂದರ್ಭ ಕಳೆದ ಏಳು ತಿಂಗಳ ಹಿಂದೆ ಬೆಂಗಳೂರಿನ ಹೆಬ್ಬಾಳ ರೈಲ್ವೆ ನಿಲ್ದಾಣದಲ್ಲಿ ಸರಗಳವು ಮಾಡಿದ್ದು, ಅದನ್ನು ಸ್ವಂತ ಊರಲ್ಲಿರುವ ಬಂಗಾರದ ವ್ಯಾಪಾರಿಗೆ ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈತ ಇನ್ನಷ್ಟು ಪ್ರಕರಣಗಳಲ್ಲಿ ಪಾಲ್ಗೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.