RIPPONPETE ; ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ಹೆಬ್ಬಂಡೆ ಆಲಯ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ 3ನೇ ಜಾತ್ರಾ ಮಹೋತ್ಸವವು ಶುಕ್ರವಾರ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯೊಂದಿಗೆ ಜರುಗಿತು.
ಮುಂಜಾನೆಯಿಂದಲೇ ಭಾರಿ ಮಳೆಯ ನಡುವೆ ಜಗನ್ಮಾತೆ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ವಿವಿಧೆಡೆಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದು ವಿಶೇಷವಾಗಿತ್ತು.
ಬೇಡಿ ಬಂದ ಭಕ್ತರ ಆಶೋತ್ತರಗಳನ್ನು ಈಡೇರಿಸುವ ತಾಯಿ ಜೇನುಕಲ್ಲಮ್ಮ ತಾಯಿಗೆ ಸಂತಾನ ಭಾಗ್ಯ, ಕಂಕಣ ಭಾಗ್ಯ ಹೀಗೆ ತಮ್ಮ ಕೌಟಂಬಿಕ ಸಮಸ್ಯೆಗಳನ್ನು ಪರಿಹರಿಸುವಂತೆ ತಾಯಿಯಲ್ಲಿ ಹರಕೆ ಹಣ್ಣು, ಕಾಯಿ ಸಮರ್ಪಿಸುತ್ತಾ ಮಹಿಳೆಯರು ಮತ್ತು ಯುವತಿಯರು ದೇವಿಯ ಬಳಿ ಪ್ರಾರ್ಥಿಸುತ್ತಿದ್ದು ಸಾಮಾನ್ಯವಾಗಿತ್ತು.
ಮಂಗಳವಾರ ಕೊನೆಯ ಜಾತ್ರೆ ಇರುವುದರಿಂದ ಇಂದು ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಹೊರ ತಾಲೂಕು, ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದರು. ಜನರನ್ನು ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್, ದೇವಸ್ಥಾನದ ಸಮಿತಿ ಅಧ್ಯಕ್ಷ ಬಿ.ಸ್ವಾಮಿರಾವ್, ಕಾರ್ಯದರ್ಶಿ ಕೆ.ಎಲ್. ಸುಧೀರ್, ಸಂತೋಷ, ಹೆಚ್.ಕೆ.ಹರೀಶ್, ಪುಟ್ಟಪ್ಪ, ಶ್ರೀನಿವಾಸ ಹಿಂಡ್ಲೆಮನೆ, ರತ್ನಮ್ಮ ಕುನ್ನೂರು, ಸರೋಜ, ಕೋಡೂರು ಗ್ರಾಮ ಪಂಚಾಯ್ತಿ ಸದಸ್ಯ ಜಯಪ್ರಕಾಶ್, ಕೋಡೂರು ವಿಜೇಂದ್ರರಾವ್, ಬೆಳ್ಳೂರು ಡಾಕಪ್ಪ, ಹರತಾಳು ರಾಮಚಂದ್ರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಎ.ಟಿ.ನಾಗರತ್ನಮ್ಮ ಇನ್ನಿತರರು ಹಾಜರಿದ್ದರು.