ಪರ್ಯಾಯ ಬೆಳೆಗಳ ಕುರಿತು ಅಡಿಕೆ ಬೆಳೆಗಾರರು ಗಮನ ಹರಿಸಲಿ ; ಕೃಷಿಕ ಸಮಾಜದ ವತಿಯಿಂದ ಅಡಿಕೆ ಕೃಷಿ ವಿಚಾರ ಸಂಕಿರಣದಲ್ಲಿ ಡಾ. ನಾಗರಾಜ ಅಡಿವೆಪ್ಪರ್

Written by malnadtimes.com

Published on:

ಹೊಸನಗರ ; ಕಳೆದ ಒಂದು ದಶಕದಿಂದ ಅಡಿಕೆ ಬೆಳೆಯುವ ಪ್ರದೇಶದಲ್ಲಿ ತೀವ್ರ ಗತಿಯಲ್ಲಿ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಬೆಳೆ ಜಾಸ್ತಿಯಾದರೂ ಧಾರಣೆಯಲ್ಲಿ ಕುಸಿತ ಇಲ್ಲದಿರುವುದು ಸದ್ಯದ ಮಟ್ಟಿಗೆ ಸಮಾಧಾನಕರ ವಿಷಯ. ಆದರೆ ರೈತರು ಅಡಿಕೆಗೆ ಪರ್ಯಾಯ ಬೆಳೆ, ತೋಟದಲ್ಲಿ ಅಂತರ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾಗರಾಜ ಅಡವೆಪ್ಪರ್ ಹೇಳಿದರು.

WhatsApp Group Join Now
Telegram Group Join Now
Instagram Group Join Now

ತಾಲೂಕು ಕೃಷಿಕ ಸಮಾಜ ಹಾಗೂ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ಇಲ್ಲಿನ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಡಿಕೆ ಕೃಷಿ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಅಡಿಕೆ ಮತ್ತು ಕಾಫಿಗೆ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಒಳ್ಳೆಯ ದರ ದೊರೆಯುತ್ತಿದೆ ಯಾದರೂ, ಬೆಳೆಗಳ ನಿರ್ವಹಣಾ ವೆಚ್ಚವೂ ಏರಿಕೆಯಾಗಿದೆ. ತೋಟಗಾರಿಕಾ ಬೆಳೆಗಳಿಗೆ ಇತ್ತೀಚೆಗೆ ಕಾಡುತ್ತಿರುವ ರೋಗಗಳು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ ಎಂದು ಅಡಿಕೆಗೆ ಪರ್ಯಾಯ ಲಾಭದಾಯಕ ಬೆಳೆ ಸಿಗದ ಕಾರಣಕ್ಕೆ ರೈತರು ಅನಿವಾರ್ಯವಾಗಿ ಅಡಿಕೆ ಬೆಳೆಯುತ್ತಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ಕುಡಿಯಲು ನೀರಿಲ್ಲದ ಪ್ರದೇಶಗಳಲ್ಲೂ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ತೋಟ ನಿರ್ಮಾಣ ಮಾಡಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಡಿಕೆ ಬೆಳೆಗಳ ವ್ಯಾಪ್ತಿ ವಿಸ್ತಾರ ಆಗುತ್ತಿರುವ ಜೊತೆಗೆ ಧಾರಣೆಯಲ್ಲಿಯೂ ಹೆಚ್ಚಳ ಆಗಿರುವುದು ಸಮಾಧಾನಕರ ವಿಷಯ. ಆದರೆ ಪರ್ಯಾಯ ಬೆಳೆ, ಅಂತರ ಬೆಳೆಗಳ ಕುರಿತು ರೈತರು ಚಿಂತನೆ ನಡೆಸಬೇಕಿದೆ ಎಂದರು‌‌.

ಗದ್ದೆಗಳಲ್ಲಿ ಅಡಿಕೆ ತೋಟ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಮಣ್ಣು ಹಾಗೂ ಸೂಕ್ತ ಪರಿಸರ ದೊರೆಯದಿದ್ದಲ್ಲಿ ಅಡಿಕೆ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯದು. ಕಾಳುಮೆಣಸು, ಕೋಕೋ, ಜಾಯಿಕಾಯಿ ಅಂತಹ ಅಂತರ ಬೆಳೆಗಳು ರೈತರಿಗೆ ಲಾಭ ತಂದು ಕೊಡುತ್ತವೆ. ಆದರೆ ಕೃಷಿಕರು ಇದಕ್ಕೆ ಆಸಕ್ತಿ ತೋರುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ವಾಟಗೋಡು ಸುರೇಶ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಡಿಕೆ ಆರೋಗ್ಯ ಹಾನಿಕರ ಎನ್ನುವ ತಪ್ಪು ಕಲ್ಪನೆಯನ್ನು ಮೊದಲು ನಿವಾರಿಸಬೇಕು. ರೈತರು ಸಹಾ ಅತಿಯಾದ ರಾಸಾಯನಿಕ ಬಳಕೆ, ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಅಡಿಕೆ ಸಂಸ್ಕೃರಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿಕ ಸಮಾಜದ ಅಧ್ಯಕ್ಷ ಎ.ವಿ.ಮಲ್ಲಿಕಾರ್ಜುನ ಮಾತನಾಡಿ, ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಮಂದಿ ಅಡಿಕೆಯನ್ನೇ ಅವಲಂಬಿಸಿದ್ದಾರೆ. ಆದರೆ ಇತ್ತೀಚೆಗೆ ಎಲೆಚುಕ್ಕಿ ರೋಗ, ಬೇರು ಹುಳು ಸಮಸ್ಯೆ, ಹಿಡಿಮುಂಡಿಗೆ ರೋಗದಿಂದ ಬೆಳೆಗಾರರು ಕಂಗೆಟ್ಟಿದ್ದಾರೆ. ಹೆಚ್ಚಿನ ಮಾಹಿತಿ ರೈತರಿಗೆ ಲಭ್ಯವಾಗಬೇಕೆನ್ನುವ ಉದ್ದೇಶಕ್ಕೆ ಸಂಸ್ಥೆಯು ಈ ಕಾರ್ಯಕ್ರಮ ಆಯೋಜಿಸಿದೆ ಎಂದರು.

ಮಾಮ್‌ಕೋಸ್ ನಿರ್ದೇಶಕರಾದ ಕೆ.ವಿ.ಕೃಷ್ಣಮೂರ್ತಿ, ಧರ್ಮಪ್ಪ, ಸಹಾಯಕ ಕೃಷಿ ನಿರ್ದೇಶಕ ಸಚಿನ್ ಹೆಗಡೆ, ಕೃಷಿ ಸಹಾಯಕ ಮಾರುತಿ, ಮಹೇಶ ಮತ್ತಿತರರು ಉಪಸ್ಥಿತರಿದ್ದರು.

ಕೃಷಿ ತಜ್ಞರಾದಡಾ.ಸ್ವಾತಿ, ಡಾ.ಸುದೀಪ್ ಹಾಗೂ ಡಾ.ಕಿರಣ್‌ಕುಮಾರ್‌ ಅಡಿಕೆ ಬೆಳೆಯಲ್ಲಿ ರೋಗ ನಿರ್ವಹಣೆ ಹಾಗೂ ಕೀಟಬಾಧೆಗಳ ಕುರಿತು ಮಾಹಿತಿ ನೀಡಿ ರೈತರ ಜೊತೆ ಸಂವಾದ ನಡೆಸಿದರು.

Leave a Comment