ನ. 27ರಂದು ರಂಭಾಪುರಿ ಪೀಠಕ್ಕೆ ಮೈಸೂರು ಮಹಾರಾಜರ ಆಗಮನ

Written by Mahesha Hindlemane

Published on:

ಬಾಳೆಹೊನ್ನೂರು ; ಶ್ರೀ ಜಗದ್ಗುರು ರೇಣುಕಾಚಾರ್ಯರಿಂದ ಸಂಸ್ಥಾಪಿತಗೊಂಡ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠಕ್ಕೆ ಮೈಸೂರು ರಾಜ ಮನೆತನದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (ಮೈಸೂರು ಲೋಕಸಭಾ ಸದಸ್ಯರು) ಅವರು ಬರಲಿರುವ ನವೆಂಬರ್ 27ರಂದು ಜರುಗಲಿರುವ ಶ್ರೀ ರಂಭಾಪುರಿ ಪೀಠದ ನವ ನಿರ್ಮಾಣ ಶಿಲ್ಪಿ ಲಿಂ. ಶ್ರೀ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪೀಠಾರೋಹಣದ ಶತಮಾನೋತ್ಸವ ಸಮಾರಂಭದ ಉದ್ಘಾಟನೆಗಾಗಿ ಆಗಮಿಸುವರು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಪಡಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶ್ರೀ ರಂಭಾಪುರಿ ಪೀಠದ ಪ್ರತಿನಿಧಿಗಳಾಗಿ ಬೆಳಗಾವಿ ಜಿಲ್ಲೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಬೇಬಿ ಚಂದ್ರವನಮಠದ ಡಾ. ತ್ರಿನೇತ್ರ ಮಹಾಂತ ಸ್ವಾಮಿಗಳು, ಕೊಣ್ಣೂರು ಮರಡಿ ಮಠದ ಡಾ. ಪವಾಡೇಶ್ವರ ಶಿವಾಚಾರ್ಯ ಸ್ವಾಮಿಗಳು, ಸಿದ್ದರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಹಾರಾಜರನ್ನು ಭೇಟಿಯಾಗಿ ಆಹ್ವಾನಿಸಿದಾಗ ಅತ್ಯಂತ ಸಂತೋಷದಿಂದ ಒಪ್ಪಿಗೆಯನ್ನು ಕೊಟ್ಟಿರುವುದು ತಮಗೆ ಅತೀವ ಸಂತೋಷ ತಂದಿದೆ ಎಂದಿರುವ ಜಗದ್ಗುರುಗಳು ಶ್ರೀ ರಂಭಾಪುರಿ ಪೀಠಕ್ಕೂ ಮೈಸೂರು ಮಹಾಸಂಸ್ಥಾನಕ್ಕೂ ಇರುವ ಸಂಬಂಧವನ್ನು ಸ್ಮರಿಸಿಕೊಂಡರು. 1885 ರಲ್ಲಿ ಶ್ರೀ ರಂಭಾಪುರಿ ಪೀಠದ ಶ್ರೀ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಕಾಲದಲ್ಲಿ ಶ್ರೀ ಚಾಮರಾಜ ಒಡೆಯರ್ ಮಹಾಪ್ರಭುಗಳು ಆಗಮಿಸಿದ್ದರು. ತದನಂತರ ಶ್ರೀ ಜಗದ್ಗುರು ರಂಭಾಪುರಿ ಪೀಠದ ಶ್ರೀ ಶಿವಾನಂದ ಜಗದ್ಗುರುಗಳ ಕಾಲದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಪ್ರಭುಗಳು 1931 ರಲ್ಲಿ ಆಗಮಿಸಿದ್ದರು. ತದನಂತರ ಶ್ರೀ ಜಯಚಾಮರಾಜ ಒಡೆಯರ್ ಮಹಾಪ್ರಭುಗಳು 1941 ರಲ್ಲಿ ಆಗಮಿಸಿದ್ದರು. ಇದೀಗ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ್ ಒಡೆಯರ್ ಮಹಾಪ್ರಭುಗಳು ನ. 27 ರಂದು ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪೀಠಾರೋಹಣದ ಶತಮಾನೋತ್ಸವ ಸಮಾರಂಭದ ಉದ್ಘಾಟನೆಗಾಗಿ ಆಗಮಿಸುತ್ತಿರುವುದು ಸಂತೋಷದ ಸಂಗತಿ. ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಕೇದಾರ, ಶ್ರೀ ಶ್ರೀಶೈಲ ಮತ್ತು ಶ್ರೀ ಕಾಶಿ ಜಗದ್ಗುರುಗಳ ಮಂಗಳ ಸಾನ್ನಿಧ್ಯದಲ್ಲಿ ಜರುಗಲಿರುವ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

ಈ ಅಪೂರ್ವ ಸಮಾರಂಭದಲ್ಲಿ ಕೇಂದ್ರದ ಸಚಿವರು ರಾಜ್ಯದ ಸಚಿವರು ಹಾಗೂ ಶಾಸಕರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಅರ್ಥಪೂರ್ಣ ಸಮಾರಂಭದಲ್ಲಿ ಎಲ್ಲ ಭಾಗದ ಧರ್ಮ ಅಭಿಮಾನಿಗಳು ಪಾಲ್ಗೊಂಡು ಪುನೀತರಾಗಬೇಕೆಂದು ಶ್ರೀ ಪೀಠದ ಪ್ರಕಟಣೆ ತಿಳಿಸಿದೆ.

Leave a Comment