ಪತ್ರಕರ್ತನ ಮೇಲೆ ಹಲ್ಲೆ ಯತ್ನ, ಜೀವ ಬೆದರಿಕೆ ; ಕ್ರಮಕ್ಕೆ ಒತ್ತಾಯ

Written by Mahesh Hindlemane

Published on:

ಸಾಗರ ; ಸಾಗರದ ಪತ್ರಕರ್ತ ಮಹೇಶ್ ಹೆಗಡೆ ಅವರಿಗೆ ಜೀವ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸಿದ ರಿಯಲ್ ಎಸ್ಟೆಟ್ ಉದ್ಯಮಿ ರವೀಂದ್ರ ಕಾಮತ್ ಮತ್ತು ಪ್ರದೀಪ್ ಎಂಬುವವರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಶನಿವಾರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಡಿವೈಎಸ್‍ಪಿ ಅವರಿಗೆ ಮನವಿ ಸಲ್ಲಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ಸಾಗರ ಪಟ್ಟಣದ ನ್ಯೂ ಬಿ.ಎಚ್.ರಸ್ತೆಯ ಸ್ವಾತಿ ವೆಜ್ ಹೋಟೆಲ್‍ಗೆ ಶನಿವಾರ ಮಹೇಶ್ ಹೆಗಡೆ ಅವರು ತಮ್ಮ ಸ್ನೇಹಿತರ ಜೊತೆ ಹೋಗಿದ್ದಾಗ ರವೀಂದ್ರ ಕಾಮತ್, ಪ್ರದೀಪ್ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ. ಮಹೇಶ್ ಹೆಗಡೆ ಅಕ್ರಮ ಜಮೀನು ಒತ್ತುವರಿ ಸೇರಿದಂತೆ ಬೇರೆಬೇರೆ ವಿಷಯಗಳ ಕುರಿತು ನಿಷ್ಪಕ್ಷಪಾತವಾಗಿ ವರದಿ ಮಾಡುತ್ತಿದ್ದಾರೆ. ರಿಯಲ್ ಎಸ್ಟೆಟ್ ದಂಧೆ ನಡೆಸುತ್ತಿರುವ ರವೀಂದ್ರ ಕಾಮತ್ ಮತ್ತು ಪ್ರದೀಪ್ ನಮ್ಮ ವಿರುದ್ದ ಸುದ್ದಿ ಬರೆಯುತ್ತೀಯಾ, ನಿನ್ನನ್ನು ಮುಗಿಸಿ ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.

ವಸ್ತುನಿಷ್ಟವಾಗಿ ವರದಿ ಮಾಡುವುದು ಪತ್ರಕರ್ತರ ಆದ್ಯ ಕರ್ತವ್ಯ. ಆದರೆ ತಮ್ಮ ವಿರುದ್ದವೇ ಸುದ್ದಿ ಮಾಡುತ್ತಿದ್ದಾರೆ ಎಂದು ಭಾವಿಸಿ ಹಲ್ಲೆ ಮಾಡುವುದು, ಜೀವ ಬೆದರಿಕೆ ಹಾಕುವುದನ್ನು ಸಂಘವು ತೀವೃವಾಗಿ ಖಂಡಿಸುತ್ತದೆ. ಇದರಿಂದ ಪ್ರಾಮಾಣಿಕವಾಗಿ ವರದಿ ಮಾಡಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮಹೇಶ್ ಹೆಗಡೆ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ರವೀಂದ್ರ ಕಾಮತ್ ಮತ್ತು ಪ್ರದೀಪ್ ಅವರ ವಿರುದ್ದ ಸಾಕಷ್ಟು ಹಗರಣಗಳ ಆರೋಪವಿದೆ. ಪತ್ರಕರ್ತರಾಗಿ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಮಹೇಶ್ ಹೆಗಡೆ ಅವರ ಮೇಲೆ ಹಲ್ಲೆ ನಡೆಸಿ, ಅಶ್ಲೀಲ ಪದ ಬಳಸಿ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಕ್ರಮ ಖಂಡನೀಯ. ತಕ್ಷಣ ರವೀಂದ್ರ ಕಾಮತ್ ಮತ್ತು ಪ್ರದೀಪ್ ಅವರನ್ನು ಬಂಧಿಸಿ, ಸೂಕ್ತ ಕಾನೂನುಕ್ರಮ ಜರುಗಿಸಬೇಕು. ಮಹೇಶ್ ಹೆಗಡೆ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಂಘದ ಅಧ್ಯಕ್ಷ ಜಿ. ನಾಗೇಶ್, ಉಪಾಧ್ಯಕ್ಷ ಲೋಕೇಶಕುಮಾರ್, ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ, ಖಜಾಂಚಿ ಎಂ.ಜಿ.ರಾಘವನ್, ಪತ್ರಕರ್ತರಾದ ಎಂ.ರಾಘವೇಂದ್ರ, ಇಮ್ರಾನ್ , ಗಿರೀಶ್ ರಾಯ್ಕರ್, ಜಮೀಲ್ , ನಾಗರಾಜ್, ರಫೀಕ್ ಕೊಪ್ಪ, ಸತ್ಯನಾರಾಯಣ, ವಸಂತ್ ಇನ್ನಿತರರು ಹಾಜರಿದ್ದರು.

Leave a Comment