ಚಿಕ್ಕಮಗಳೂರು ; ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಯಾಣಿಸುತ್ತಿದ್ದ ಕಾರಿನ ಹಿಂಬದಿಯಲ್ಲಿ ಚಲಿಸುತ್ತಿದ್ದ ಮತ್ತೊಂದು (ಬೆಂಗಾವಲು) ಕಾರಿಗೆ ಲಾರಿ ಗುದ್ದಿದ ಘಟನೆ ತಾಲೂಕಿನ ಲಕ್ಯಾ ಕ್ರಾಸ್ ಬಳಿ ನಡೆದಿದೆ. ಅಪಘಾತದಲ್ಲಿ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಚಿಕ್ಕಮಗಳೂರು ನಗರದಲ್ಲಿ ಶುಕ್ರವಾರ ಬಸವತತ್ವ ಪೀಠದಲ್ಲಿ ಆಯೋಜಿಸಿದ್ದ ಬಸವತತ್ವ ಸಮಾವೇಶದಲ್ಲಿ ಪಾಲ್ಗೊಂಡು ಶಿವಮೊಗ್ಗಕ್ಕೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೇರೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಕಾರಿನ ಹಿಂಬದಿಯಲ್ಲಿ ಚಲಿಸುತ್ತಿದ್ದ ಹೊರ ಜಿಲ್ಲೆಗಳಿಗೆ ತೆರಳಲು ಬಳಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಲಾರಿ ಗುದ್ದಿದ ರಭಸಕ್ಕೆ ಕಾರಿನ ಹಿಂಭಾಗ ಜಖಂಗೊಂಡಿದೆ.
ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಪಕ್ಷದ ಕಡೆಯಿಂದ ನೀಡಲಾದ ಅಧಿಕೃತ ಕಾರು ಇದಾಗಿತ್ತು. ವಿಜಯೇಂದ್ರ ಅವರು ತಮ್ಮ ಪರ್ಸನಲ್ ಕಾರಿನಲ್ಲಿ ಇದ್ದರು. ಪಕ್ಷ ನೀಡಿದ್ದ ಕಾರಿನಲ್ಲಿ ವಿಜಯೇಂದ್ರ ಅವರ ಫೋಟೋಗ್ರಾಫರ್ ಮತ್ತು ಪಿಎ ಸಂಚರಿಸುತ್ತಿದ್ದರು.

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಲಾರಿ ಚಾಲಕನ ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿ ಪ್ರಕರಣ ದಾಖಲಿಸಿದ್ದಾರೆ.
ಬೀರೂರು ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ಲಾರಿ ಮರದ ದಿಣ್ಣೆ ತುಂಬಿಕೊಂಡು ಚಿಕ್ಕಮಗಳೂರು ನಗರದಿಂದ ಮುಂಬೈಗೆ ತೆರಳುತ್ತಿತ್ತು ಎನ್ನಲಾಗಿದೆ.