ಮಳೆಹಾನಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ : ಮಧು ಬಂಗಾರಪ್ಪ

Written by Koushik G K

Published on:

ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಅವಧಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೃಷಿ ಮತ್ತು ಮೂಲಸೌಕರ್ಯಗಳಿಗೆ ಉಂಟಾದ ಹಾನಿ ದಿನೇದಿನೇ ಗಂಭೀರವಾಗುತ್ತಿದೆ. ಸುಮಾರು 45,000 ಹೆಕ್ಟೇರ್ ಅಡಿಕೆ ಬೆಳೆ ಕೊಳೆರೋಗಕ್ಕೆ ತುತ್ತಾಗಿದೆ, ಜೊತೆಗೆ ಸಾವಿರಾರು ಹೆಕ್ಟೇರ್ ಮೆಕ್ಕೆಜೋಳದ ಬೆಳೆ ನಾಶವಾಗಿರುವುದಾಗಿ ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಿವಮೊಗ್ಗದಲ್ಲಿ ಗಣೇಶ ವಿಸರ್ಜನೆ ಗಲಾಟೆ: ಹಿಂದೂ–ಮುಸ್ಲಿಂ ಜಗಳವೆಂದು ಬಿಂಬಿಸಲು ಯತ್ನ, ಬಿಜೆಪಿ ಕಾರ್ಯಕರ್ತನ ವಿರುದ್ಧ ದೂರು

ಈ ಕುರಿತು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, “ಬೆಳೆ ಹಾನಿಯ ವರದಿ ತಕ್ಷಣ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಹಾನಿಯ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಈಗಾಗಲೇ ಆಗಿರುವ ನಷ್ಟಕ್ಕೆ ಪರಿಹಾರ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು” ಎಂದು ಸ್ಪಷ್ಟಪಡಿಸಿದರು.

ಅಡಿಕೆ ಕೊಳೆರೋಗ ನಿಯಂತ್ರಣ ಕ್ರಮಗಳು

ಅಡಿಕೆ ಬೆಳೆ ಹಾನಿಯ ಹಿನ್ನೆಲೆಯಲ್ಲಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳೊಂದಿಗೆ ಚರ್ಚಿಸಲಾಗಿದೆ. ಬೆಳೆ ರೋಗವನ್ನು ನಿಯಂತ್ರಿಸುವ ಕ್ರಮಗಳು ಮತ್ತು ರೈತರಿಗೆ ನೀಡಬಹುದಾದ ಸಲಹೆಗಳ ಕುರಿತು ತಜ್ಞರಿಂದ ಮಾಹಿತಿಯನ್ನು ಪಡೆಯಲಾಗಿದೆ.

ರೈತರಿಗೆ ಪರಿಹಾರ ಅಗತ್ಯ

ಸಚಿವರು ಮುಂದುವರಿದು, “ರೈತರಿಗೆ ಸಮಾಧಾನ ತರುವ ರೀತಿಯಲ್ಲಿ ಕೇಂದ್ರ ಸರ್ಕಾರವು ಹೆಚ್ಚಿನ ಪರಿಹಾರ ಮೊತ್ತವನ್ನು ಘೋಷಿಸಬೇಕು. ಈಗಾಗಲೇ ಘೋಷಿಸಿರುವ ಮೊತ್ತ ಅತೀ ಅಲ್ಪವಾಗಿದೆ. ಪರಿಹಾರ ಧನ ವಿತರಿಸುವಲ್ಲಿ ತಾರತಮ್ಯ ಬೇಡ” ಎಂದು ಒತ್ತಿ ಹೇಳಿದರು. ಜೊತೆಗೆ, ತೆಂಗು ಅಭಿವೃದ್ದಿ ಮಂಡಳಿಯ ಶಾಖೆಯನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾರಂಭಿಸುವ ಉದ್ದೇಶವಿದೆ ಎಂದರು.

ಮೂಲಸೌಕರ್ಯ ಹಾನಿಗೆ ಪರಿಹಾರ

ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ರಸ್ತೆಗಳನ್ನು ದುರಸ್ತಿಗೊಳಿಸುವ ಕಾರ್ಯ ಕೈಗೊಳ್ಳಲಾಗುವುದು. ಪ್ರಗತಿಪಥ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 50 ಕಿ.ಮೀ. ರಸ್ತೆ ಅಭಿವೃದ್ಧಿಗೆ 50 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲು ಸರ್ಕಾರ ತೀರ್ಮಾನಿಸಿದೆ. ವಿಶೇಷವಾಗಿ ಮಲೆನಾಡು ಪ್ರದೇಶದಲ್ಲಿ ಹೆಚ್ಚು ಪ್ರಮಾಣದ ರಸ್ತೆ ಹಾನಿಯಾಗಿರುವುದರಿಂದ, ಹೆಚ್ಚುವರಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ

ರಾಜ್ಯದಲ್ಲಿ ಪ್ರಸ್ತುತ 500 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಆದರೆ ಈಗ ಆ ಸಂಖ್ಯೆಯನ್ನು 800ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದು, 3000 ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಹೊಸ ಶಾಲೆಗಳು ಪ್ರಾರಂಭಗೊಳ್ಳಲಿವೆ. ಅಲ್ಲದೇ, ಇಂತಹ ಶಾಲೆಗಳ ಅಭಿವೃದ್ಧಿಗೆ ಸರ್ಕಾರಿ ಹೊರಗಿನ ಸಂಸ್ಥೆಗಳ ಸಹಾಯವನ್ನು ಪಡೆಯಲಾಗುವುದು.

ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು 13,000 ಶಿಕ್ಷಕರನ್ನು ತಕ್ಷಣ ನಿಯೋಜಿಸಲಾಗಿದ್ದು, ಇನ್ನೂ 18,500 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಅಕ್ಟೋಬರ್ ಅಂತ್ಯದೊಳಗೆ ಜಾತಿಗಣತಿ ಪೂರ್ಣಗೊಳಿಸುವ ಉದ್ದೇಶವಿದ್ದು, ಶಿಕ್ಷಣಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ

ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ 26 ತಾಲೂಕುಗಳ ಜನರು ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಇದನ್ನು ಗಮನಿಸಿದ ಸರ್ಕಾರ ಮುಂದಿನ 10–15 ದಿನಗಳಲ್ಲಿ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ. ಅಗತ್ಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಇತರ ಯೋಜನೆಗಳು

ರಸ್ತೆ, ಕಟ್ಟಡ, ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಸಹಸ್ರಾರು ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಈ ಯೋಜನೆಗಳ ಉದ್ಘಾಟನೆಗೆ ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುವುದು.

ಈ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಆರ್. ಪ್ರಸನ್ನಕುಮಾರ್, ಶ್ರೀನಿವಾಸ ಕರಿಯಣ್ಣ, ಕಲಗೋಡು ರತ್ನಾಕರ, ಕಲೀಂವಲ್ಲಾ, ದೇವಿಕುಮಾರ್, ರಮೇಶ್, ಶೇಷಾದ್ರಿ, ರಮೇಶ್ ಹೆಗ್ಡೆ, ಶರತ್ ಮರಿಯಪ್ಪ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.

ಸಾಗರ: ಬೀದಿ ನಾಯಿಗಳ ದಾಳಿ: ಮೂರು ವರ್ಷದ ಬಾಲಕನಿಗೆ ತೀವ್ರ ಗಾಯ

Leave a Comment