ಭದ್ರಾವತಿ :ಭದ್ರಾವತಿಯಲ್ಲಿ ಚೆಡ್ಡಿ ಗ್ಯಾಂಗ್ ಮತ್ತೆ ಸಕ್ರಿಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ನಗರದ ಸಿದ್ದರೂಢ ನಗರ ಪ್ರದೇಶದಲ್ಲಿ ಸುಮಾರು 10 ಮನೆಗಳಲ್ಲಿ ಓಡಾಡಿದ ಗ್ಯಾಂಗ್, ಬಳಿಕ ಪೊಲೀಸರನ್ನ ಕಂಡೊಡನೆ ಭದ್ರ ನದಿಯ ಮೂಲಕ ಪರಾರಿಯಾದ ಘಟನೆ ಭದ್ರಾವತಿ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
10 ಮನೆಗಳಲ್ಲಿ ಓಡಾಟ – ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ
ಶನಿವಾರ ರಾತ್ರಿ 5-6 ಜನರಿಂದ ಕೂಡಿದ ಚೆಡ್ಡಿ ಗ್ಯಾಂಗ್, ಮಾರಕಾಸ್ತ್ರಗಳನ್ನು ಹಿಡಿದು ಬಡಾವಣೆಯ 10 ಮನೆಗಳ ಬಳಿ ಓಡಾಡಿರುವುದು ಸಿಸಿ ಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಇದರಿಂದ ಸ್ಥಳೀಯರಲ್ಲಿ ದೊಡ್ಡ ಭಯದ ವಾತಾವರಣ ನಿರ್ಮಾಣವಾಗಿದೆ.
ಕೆಲವು ದಿನಗಳ ಹಿಂದೆ ಶಿವಮೊಗ್ಗದ ವಿದ್ಯಾನಗರದಲ್ಲಿಯೂ ಇದೇ ಗ್ಯಾಂಗ್ ಕಂಡುಬಂದಿತ್ತು. ಇದೀಗ ಮತ್ತೆ ಭದ್ರಾವತಿಯಲ್ಲಿ ತಿರುಗಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ.
ವೈದ್ಯರ ಮನೆಯಲ್ಲಿ ಕಿಟಕಿ ಒಡೆದು ನುಗ್ಗಲು ಯತ್ನ
ಸ್ಥಳೀಯ ವೈದ್ಯರಾದ ಡಾ. ಅಶ್ವಥ್ ನಾರಾಯಣ ಬಾವರ ಮನೆಗೆ ಗ್ಯಾಂಗ್ ನುಗ್ಗಲು ಯತ್ನಿಸಿದೆ. ಅಡಿಗೆಮನೆಯ ಕಿಟಕಿಯನ್ನು ತೆಗೆಯುವಾಗ ಕುಟುಂಬದವರು ಎಚ್ಚರಗೊಂಡಿದ್ದಾರೆ. ಇದೇ ವೇಳೆ ಎದುರಿನ ಮನೆಯಲ್ಲಿ ಮಗು ಅಳಲು ಆರಂಭಿಸಿದ ಕಾರಣ ಲೈಟ್ ಹಚ್ಚಲಾಗಿದೆ. ಇದನ್ನು ಕಂಡು ಚೆಡ್ಡಿ ಗ್ಯಾಂಗ್ ತಕ್ಷಣ ಪರಾರಿಯಾಗಿದೆ.
ಪೊಲೀಸರ ಆಗಮನ – ನದಿಯಿಂದ ಎಸ್ಕೇಪ್
ಘಟನೆ ವೇಳೆ ಬೀಟ್ಸ್ ಪೊಲೀಸರು ಸ್ಥಳಕ್ಕೆ ಬಂದಿದ್ದನ್ನು ಕಂಡ ಗ್ಯಾಂಗ್ ಸದಸ್ಯರು, ಪಕ್ಕದಲ್ಲಿರುವ ಭದ್ರ ನದಿಗೆ ಜಿಗಿದು ಪರಾರಿಯಾದ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರ ಕೈಗೆ ಬಂದೂಕುಗಳೂ ಬಂದಿವೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಪೋಲೀಸ್ ಇಲಾಖೆ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
ಜನರಲ್ಲಿ ಆತಂಕ
ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವಿಡಿಯೋ ಹರಿದಾಡುತ್ತಿದ್ದು, ಭದ್ರಾವತಿ ನಿವಾಸಿಗಳು ತಮ್ಮ ಮನೆಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಿಕೊಳ್ಳಲು ಆರಂಭಿಸಿದ್ದಾರೆ. ಚೆಡ್ಡಿ ಗ್ಯಾಂಗ್ ವಿರುದ್ಧ ಪೊಲೀಸರು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯ ವ್ಯಕ್ತಪಡಿಸಿದ್ದಾರೆ.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650