ಜೀವಾತ್ಮರಿಗೆ ಜೀವನೋತ್ಸಾಹ ತುಂಬುವುದೇ ದಸರಾ ಮಹೋತ್ಸವದ ಗುರಿ ; ರಂಭಾಪುರಿ ಶ್ರೀಗಳು

0 70

ಎನ್‌.ಆರ್.ಪುರ : ಅಶಾಂತಿ ಅತೃಪ್ತಿಯಿಂದ ಬಳಲುತ್ತಿರುವ ಜೀವ ಜಗತ್ತಿಗೆ ಧಾರ್ಮಿಕ ಪ್ರಜ್ಞೆ ಸಾಮಾಜಿಕ ಪ್ರಜ್ಞೆ ಮತ್ತು ರಾಷ್ಟ್ರಾಭಿಮಾನ ಬೆಳೆಸುವುದರ ಮೂಲಕ ಜನ ಸಮುದಾಯದಲ್ಲಿ ಜೀವನೋತ್ಸಾಹ ತುಂಬುವುದೇ ದಸರಾ ಮಹೋತ್ಸವದ ಮೂಲ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶನಿವಾರ ಲಿಂಗಸುಗೂರು ನಗರದಲ್ಲಿ ಜರುಗುತ್ತಿರುವ ಶ್ರೀ ರಂಭಾಪುರಿ ಜಗದ್ಗುರುಗಳವರ ದಸರಾ ಧರ್ಮ ಸಮ್ಮೇಳನದ ನಿಮಿತ್ಯ ಶುಭಾಗಮನ ಸ್ವಾಗತ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭೌತಿಕ ಸಂಪನ್ಮೂಲ ಬೆಟ್ಟದಷ್ಟಿದ್ದರೂ ಮನುಷ್ಯನ ಜೀವನದಲ್ಲಿ ಶಾಂತಿ ಮತ್ತು ಸ್ಥಿರತೆಯಿಲ್ಲ. ಆಧುನಿಕತೆಯ ಭರಾಟೆಯಲ್ಲಿ ಮಾನವೀಯ ಸಂಬಂಧಗಳು ಬಹಳಷ್ಟು ಶಿಥಿಲಗೊಳ್ಳುತ್ತಿವೆ. ಮನುಷ್ಯನಲ್ಲಿ ಪ್ರೀತಿ ನೀತಿ ಸಾತ್ವಿಕತೆ ಸಹಾನುಭೂತಿ ಬೆಳೆಯುವುದರ ಬದಲಾಗಿ ಅಸಂಯಮ ಅತೃಪ್ತಿ ಅಸಹನೆ ಅತಿರೇಕ ವರ್ತನೆಗಳು ಹೆಚ್ಚುತ್ತಿವೆ. ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮ ಆಯಾ ಕಾಲ ಘಟ್ಟಗಳಲ್ಲಿ ಧಾರ್ಮಿಕ ಮೌಲ್ಯಗಳ ಸಂರಕ್ಷಣೆ ಮತ್ತು ಪರಿಪಾಲನೆಯ ಬಗೆಗೆ ಜಾಗೃತಿಯನ್ನು ಮೂಡಿಸುತ್ತಲೇ ಬಂದಿದೆ. ಪ್ರಾಚೀನ ಇತಿಹಾಸ ಭವ್ಯ ಪರಂಪರೆ ಹೊಂದಿದ ಶ್ರೀ ಜಗದ್ಗುರು ರಂಭಾಪುರಿ ಪೀಠ ಸಾಮರಸ್ಯ ಸೌಹಾರ್ದತೆ ಶಾಂತಿ ನೆಮ್ಮದಿ ಸಂವರ್ಧಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಲೇ ಬಂದಿದೆ. ಶ್ರೀ ರಂಭಾಪುರಿ ಪೀಠದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಲಿಂಗಸುಗೂರು ನಗರದಲ್ಲಿ ಜರುಗಲಿರುವುದು ಈ ಭಾಗದ ಎಲ್ಲ ಭಕ್ತರಿಗೆ ಸಂತೋಷ ಉಂಟು ಮಾಡಿದೆ.

ಹತ್ತು ದಿನಗಳ ಕಾಲ ಜರುಗಲಿರುವ ಶರನ್ನವರಾತ್ರಿಯಲ್ಲಿ ಬೆಳಿಗ್ಗೆ ಈಶ್ವರ ದೇವಸ್ಥಾನದ ಶ್ರೀ ವೀರಭದ್ರೇಶ್ವರ ಸಭಾ ಭವನದಲ್ಲಿ ಲೋಕ ಕಲ್ಯಾಣಾರ್ಥವಗಿ ಇಷ್ಟಲಿಂಗ ಮಹಾಪೂಜಾ ಜರುಗುತ್ತದೆ. ಸಂಜೆ ನಗರದ ಸರಕಾರಿ ಜ್ಯೂನಿಯರ್ ಕಾಲೇಜ ಆವರಣದಲ್ಲಿ ಭವ್ಯವಾಗಿ ನಿರ್ಮಿಸಿರುವ ಮಾನವ ಧರ್ಮ ಮಂಟಪದಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಅದ್ದೂರಿಯಾಗಿ ಜರುಗುತ್ತದೆ. ಈ ಪವಿತ್ರ ಸಮಾರಂಭದಲ್ಲಿ ಎಲ್ಲ ಮತ ಬಾಂಧವರು ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲು ಸಹಕರಿಸಬೇಕೆಂದು ತಿಳಿಸಿದ ಜಗದ್ಗುರುಗಳು ಇದು ಈ ಹಿಂದಿನ ಎಲ್ಲಾ ದಸರಾ ಸಮಾರಂಭಗಳನ್ನು ಮೀರಿ ಒಂದು ಹೊಸ ಇತಿಹಾಸವನ್ನು ಸೃಷ್ಠಿ ಮಾಡುತ್ತದೆ ಎಂಬ ಆತ್ಮ ವಿಶ್ವಾಸ ತಮಗಿದೆ ಎಂದು ಹರುಷ ವ್ಯಕ್ತ ಪಡಿಸಿ ಇದಕ್ಕಾಗಿ ಶ್ರಮಿಸಿದ ಸಮಿತಿಯ ಎಲ್ಲಾ ಸದಸ್ಯರಿಗೆ ಮತ್ತು ಭಕ್ತ ಸಮುದಾಯಕ್ಕೆ ಶುಭ ಹಾರೈಸಿದರು.


ಸಮಿತಿಯ ಗೌರವ ಅಧ್ಯಕ್ಷರಾದ ದೇವರಭೂಪುರ ಕ್ಷೇತ್ರದ ಅಭಿನವ ಗಜದಂಡ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ ಈ ಭಾಗದ ಭಕ್ತರ ಸೌಭಾಗ್ಯ. ಬಹು ದಿನಗಳ ಕನಸು ನನಸಾದ ಸುದಿನ. ಹತ್ತು ದಿನಗಳ ಕಾಲ ಜರುಗುವ ಸಮಾರಂಭದಲ್ಲಿ ಎಲ್ಲರೂ ಪಾಲ್ಗೊಂಡು ಪುನೀತರಾಗಬೇಕೆಂದರು. ಸಮಾರಂಭದ ವೇದಿಕೆಯಲ್ಲಿ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು, ಮಳಲಿ ಡಾ.ನಾಗಭೂಷಣ ಶಿವಾಚಾರ್ಯರು, ಸಿಂಧನೂರಿನ ಸೋಮನಾಥ ಶಿವಾಚಾರ್ಯರು, ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯರು, ಹುನಕುಂಟಿ ಶರಣಯ್ಯ ತಾತನವರು, ಸೋಮಶೇಖರಯ್ಯ ತಾತನವರು, ನಂದಿಕೇಶ್ವರ ಅಮ್ಮನವರು ಪಾಲ್ಗೊಂಡಿದ್ದರು.

ದಸರಾ ಸೇವಾ ಸಮಿತಿ ಅಧ್ಯಕ್ಷರಾದ ಮಾನಪ್ಪ ವಜ್ಜಲ, ಪ್ರಧಾನ ಕಾರ್ಯದರ್ಶಿ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ಅಲಂಕೃತ ಭವ್ಯ ಸಾರೋಟ ಮೆರವಣಿಗೆ ಐಎಂಎ ಭವನದಿಂದ ಪ್ರಾರಂಭಗೊಂಡು ಬಸ್ ನಿಲ್ದಾಣ ವೃತ್ತ, ಪೊಲೀಸ್ ಠಾಣೆ ಮಾರ್ಗ, ಗಡಿಯಾರ ವೃತ್ತ ಮೂಲಕ ಈಶ್ವರ ದೇವಸ್ಥಾನದ ವರೆಗ ವಿಜೃಂಭಣೆಯಿಂದ ಜರುಗಿತು. ಕಳಸ ಹಿಡಿದ ಸುಮಂಗಲೆಯರು, ಕುಂಭ ಹೊತ್ತ ಮಹಿಳೆಯರು, ವೀರಗಾಸೆ ಪುರವಂತರು, ಭಜನಾ ಮಂಡಳಿ ಇವರೆಲ್ಲರೂ ಪಾಲ್ಗೊಂಡು ಮೆರವಣಿಗೆಗೆ ಶೋಭೆ ತಂದರು.

Leave A Reply

Your email address will not be published.

error: Content is protected !!