ಡಿ.ಬಿ. ಚಂದ್ರೇಗೌಡರ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

0 246

ಮೂಡಿಗೆರೆ: ನಿನ್ನೆ ಕೊನೆಯುಸಿರೆಳೆದ ಮಾಜಿ ಸಚಿವ, ಹಿರಿಯ ರಾಜಕಾರಣಿ ಡಿ.ಬಿ ಚಂದ್ರೇಗೌಡ ಅವರ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪಡೆದರು.


ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ನಿಧನ ಹಿನ್ನೆಲೆ ಇಂದು ಬೆಳಗ್ಗೆ ಬೆಂಗಳೂರಿನಿಂದ ಹೊರಟ ಸಿಎಂ ಸಿದ್ದರಾಮಯ್ಯ ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಕೂಡ ಆಗಮಿಸಿದರು.

ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಚಂದ್ರೇಗೌಡರ‌ ಅಂತಿಮ‌ ದರ್ಶನವನ್ನು ಸಿಎಂ ಸಿದ್ದರಾಮಯ್ಯ ಅವರು ಪಡೆದರು.

ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ಅಂತಿಮ ನಮನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯಗೆ ಜಿಲ್ಲೆಯ ಐದು ಮಂದಿ ಕಾಂಗ್ರೆಸ್ ಶಾಸಕರು ಸಾಥ್ ನೀಡಿದರು. ಈ ವೇಳೆ ಪೊಲೀಸ್ ಇಲಾಖೆಯಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಚಂದ್ರೇಗೌಡರಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.

ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟು ರಾಜಕೀಯ ಪುನರ್ಜನ್ಮವನ್ನು ಡಿ.ಬಿ.ಚಂದ್ರೇಗೌಡ ಕಲ್ಪಿಸಿದ್ದರು. ಜನತಾ ಪಕ್ಷದ ಮೂಲಕ ಸಿದ್ದರಾಮಯ್ಯ ಜೊತೆಗೆ ಡಿ.ಬಿ ಚಂದ್ರೇಗೌಡ ರಾಜಕೀಯಕ್ಕೆ ಬಂದಿದ್ದರು. ವಿಧಾನ ಪರಿಷತ್ ಸದಸ್ಯರು, ಶಾಸಕರು, ಲೋಕಸಭಾ ಸದಸ್ಯ ಮತ್ತು ಸ್ಪೀಕರ್ ಕೂಡ ಆಗಿದ್ದ ಏಕೈಕ ರಾಜಕಾರಣಿಯಾಗಿ ಡಿ.ಬಿ ಚಂದ್ರೇಗೌಡ ಗುರುತಿಸಿಕೊಂಡಿದ್ದಾರೆ.

1979ರಲ್ಲಿ ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಚಂದ್ರೇಗೌಡ ಕ್ಷೇತ್ರ ಬಿಟ್ಟು ಕೊಟ್ಟಿದ್ದರು. ಚಿಕ್ಕಮಗಳೂರಿನಿಂದ ಗೆದ್ದ ಇಂದಿರಾ ಗಾಂಧಿ ಅವರು ನಂತರ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಹೀಗಾಗಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದ ಚಂದ್ರೇಗೌಡ ಅರ ಹೆಸರು ಕಾಂಗ್ರೆಸ್ ಇತಿಹಾಸದಲ್ಲಿ ಅಜರಾಮರ ಮತ್ತು ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಹೇಳಲಾಗ್ತಿದೆ.

ಅತ್ತ ಮತ್ತೊಂದೆಡೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಅಂತಿಮ ದರ್ಶನ ಪಡೆದರು.

ಅಮೇರಿಕಾದಿಂದ ಡಿಬಿಸಿ ಮಗಳು ಬಂದ ಕೂಡಲೇ ಮಧ್ಯಾಹ್ನ 3 ಗಂಟೆ ವೇಳೆಗೆ ಮೂಡಿಗೆರೆ ತಾಲೂಕಿನ ಸ್ವಗ್ರಾಮ ದಾರದಹಳ್ಳಿಯಲ್ಲಿ ಡಿ.ಬಿ ಚಂದ್ರೇಗೌಡರ ಅಂತ್ಯಸಂಸ್ಕಾರ ನೆರವೇರಿತು.

Leave A Reply

Your email address will not be published.

error: Content is protected !!