ಶ್ರೇಷ್ಟ ಸಂವಿಧಾನವನ್ನು ಹೊಂದಿದ ಅತಿದೊಡ್ಡ ರಾಷ್ಟ್ರ ಭಾರತ ; ಡಾ|| ಆರ್.ಸೆಲ್ವಮಣಿ

0 84


ಶಿವಮೊಗ್ಗ : ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿರುವ ಪ್ರಗತಿಶೀಲ ರಾಷ್ಟ್ರ ಭಾರತವು ಅತಿದೊಡ್ಡ ಹಾಗೂ ಶ್ರೇಷ್ಟ ಸಂವಿಧಾನವನ್ನು ಹೊಂದಿದ್ದು, ಎಲ್ಲಾ ವರ್ಗದ ಜನರ ಆಶೋತ್ತರಗಳಿಗೆ ಪೂರಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.


ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪ್ರತಿ ವಿಷಯಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಪ್ರಜಾಪ್ರಭುತ್ವದ ಆಶಯವನ್ನು ಎತ್ತಿಹಿಡಿಯಬೇಕು. ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿಯೂ ಪ್ರಜಾಪ್ರಭುತ್ವದ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಪೀಠಿಕೆಯನ್ನು ಮಾತ್ರವಲ್ಲ ಪೂರ್ಣ ಸಂವಿಧಾನವನ್ನೇ ಓದುವ ಮೂಲಕ ಅರ್ಥೈಸಿಕೊಂಡು, ಸಂವಿಧಾನದ ಆಶಯಕ್ಕೆ ಪೂರಕವಾಗಿ ನಡೆದುಕೊಳ್ಳಬೇಕಾದ ಅಗತ್ಯವಿದೆ. ಇದರಿಂದಾಗಿ ದೇಶದ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂದವರು ನುಡಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮಾತನಾಡಿ, ವಿಶ್ವದಲ್ಲಿ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ, ವಿಶ್ವಗುರುವಾಗಿ ಗುರುತಿಸಲಾಗುತ್ತಿರುವುದನ್ನು ಹಾಗೂ ರಾಷ್ಟ್ರದ ನಾಯಕರ ಹಿತಚಿಂತನೆಗಳಿಂದ ವಿಶ್ವದ ಗಮನಸೆಳೆದು ಜನಮನ್ನಣೆ ಪಡೆದಿರುವುದು ಎಲ್ಲರೂ ಸಂಭ್ರಮಿಸಬೇಕಾದ ಸಂಗತಿಯಾಗಿದೆ ಎಂದರು.
ಭಾರತ ಭಾರತವಾಗಿಯೇ ಉಳಿಸಿಕೊಳ್ಳಲು ದೇಶದ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟಿದ್ದನ್ನು, ಅದರ ಶ್ರೇಯಸ್ಸಿಗೆ ಶ್ರಮಿಸಿದ್ದುದನ್ನು ಅತ್ಯಂತ ಗೌರವದಿಂದ ನೆನಪಿಸಿಕೊಳ್ಳಬೇಕು. ದೇಶದಲ್ಲಿ ಸಾಮಾನ್ಯನಿಂದ ಅತ್ಯುಚ್ಚ ಸ್ಥಾನ ಪಡೆದಿರುವ ವ್ಯಕ್ತಿಯೂ ಎಲ್ಲರಂತೆ ಸಮಾನವಾದ ಜೀವನವನ್ನು ನಡೆಸಲು ಎಲ್ಲಾ ರೀತಿಯ ಹಕ್ಕುಗಳನ್ನು ನೀಡಲಾಗಿದೆ. ಅನೇಕರು ಸಾಮಾನ್ಯ ವ್ಯಕ್ತಿಗಳೂ ಕೂಡ ದೇಶಕ್ಕೆ ಶ್ರೇಷ್ಟವಾದ ಪರಂಪರೆಯನ್ನು ಚಿಂತನೆಯನ್ನು ನೀಡಿದ್ದಾರೆ. ದೇಶದಲ್ಲಿ ತುಳಿತಕ್ಕೊಳಗಾದ ಸಮುದಾಯವರನ್ನು ಮೇಲೆತ್ತಲು ಸಿಡಿದೆದ್ದ ಅಂಬೇಡ್ಕರ್‍ರವರು ಮುಂದಿನ ದಿನಗಳಲ್ಲಿ ದೇಶ ಇರಬೇಕಾದ ರೀತಿಯ ಬಗ್ಗೆ ಸಕಾಲಿಕ ಮಾರ್ಗದರ್ಶನ ಮಾಡಿದ್ದಾರೆ ಎಂದರು.


ಇಡೀ ರಾಷ್ಟ್ರಕ್ಕೆ ಶಕ್ತಿತುಂಬಲು ಪ್ರಜಾಪ್ರಭುತ್ವದ ಶಕ್ತಿಯನ್ನು ಬಲಪಡಿಸಲು ಇರುವ ಸಾಧನ ಎಂದರೆ ಸಂವಿಧಾನ. ಅದಕ್ಕಾಗಿ ಅಂಬೇಡ್ಕರ್ ಅವರ ಕೊಡುಗೆಯನ್ನು ಎಲ್ಲರೂ ಮೆಚ್ಚಲೇಬೇಕು. ಇಂದಿನ ಯುವಪೀಳಿಗೆ ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ಇಂದಿನ ಯುವ ವಿದ್ಯಾರ್ಥಿಗಳು ಭಾರತ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯವನ್ನು ಎತ್ತಿಹಿಡಿಯುವಲ್ಲಿ ಶ್ರಮಿಸಬೇಕಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಮಹಾನಗರಪಾಲಿಕೆಯ ಆವರಣದಲ್ಲಿರುವ ಡಾ|| ಅಂಬೇಡ್ಕರ್ ಅವರು ಪುತ್ಥಳಿಗೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಪುಷ್ಪನಮನ ಸಲ್ಲಿಸಿದರು. ನಂತರ ಸಹಸ್ರಾರು ವಿದ್ಯಾರ್ಥಿಗಳು ಹಾಗೂ ಕಲಾತಂಡಗಳೊಂದಿಗೆ ಅಂಬೇಡ್ಕರ್‍ರವರ ಭಾವಚಿತ್ರದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಂತಿಮವಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಸಂಪನ್ನಗೊಂಡಿತು.


ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲೇಶಪ್ಪ, ಮಹಾನಗರಪಾಲಿಕೆಯ ಮಹಾಪೌರರಾದ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!