ಕಾಡಾನೆ ದಾಳಿ ; ಮೃತಳ ಕುಟುಂಬಕ್ಕೆ ₹ 15 ಲಕ್ಷ ಪರಿಹಾರ ವಿತರಿಸಲು ಸಿಎಂ ಸೂಚನೆ

0 188

ಮೂಡಿಗೆರೆ: ತಾಲೂಕಿನ ಹೆಡದಾಳು ಬಳಿ ಬುಧವಾರ ಬೆಳಗ್ಗೆ ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟ ಯುವತಿ ಮೀನಾ ಅವರ ಕುಟುಂಬಕ್ಕೆ ತಕ್ಷಣ 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಮೂಡಿಗೆರೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ತುರ್ತು ಸಭೆ ನಡೆಸಿದರು. ಪಟ್ಟಣಕ್ಕೆ ಬಂದಿರುವ ಕಾಡಾನೆಗಳನ್ನು ವಾಪಾಸ್ ಕಾಡಿಗೆ ಕಳುಹಿಸಲು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದರು.

ಮೃತ ಮೀನಾ ಅವರ ಮೃತದೇಹ ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರ ಜತೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕಾಡಾನೆ ಹಾವಳಿ ತಪ್ಪಿಸಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಸೂಚನೆ ನೀಡಿದ್ದೇನೆ. ಅರಣ್ಯ ಸಚಿವರೂ ಇಲ್ಲಿಗೆ ಬಂದು ಸುದೀರ್ಘ ಸಭೆ ನಡೆಸಿ ರಕ್ಷಣಾ ಕಾರ್ಯಗಳ ಕುರಿತಾಗಿ ಕ್ರಮ ಕೈಗೊಳ್ಳುತ್ತಾರೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಕಾಫಿ ತೋಟಗಳು ಇರುವುದರಿಂದ ಕಾಡಾನೆಗಳು ಬರುತ್ತಿವೆ. ರೈಲ್ವೆ ಬ್ಯಾರಿಕೇಡ್ ಹಾಕುವುದೂ ಸೇರಿ ಅಗತ್ಯ ಕ್ರಮಗಳ ಕುರಿತು ಕಾರ್ಯಪಡೆಗೆ ಸ್ಪಷ್ಟ ಸೂಚನೆ ನೀಡಲು ಅರಣ್ಯ ಸಚಿವರ ಜತೆ ಚರ್ಚಿಸಿದ್ದೇನೆ ಎಂದು ಹೇಳಿದರು.

ಕಾಡಾನೆಗಳಿಗೆ ಗುಂಡು ಹೊಡೆದು ಕೊಲ್ಲಬೇಕು ಎನ್ನುವ ಸ್ಥಳೀಯರ ಮತ್ತು ಪ್ರತಿಭಟನಾಕಾರರ ಒತ್ತಾಯದ ಕುರಿತಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಆ ಹಂತಕ್ಕೆ ಯೋಚನೆ ಮಾಡುವುದು ಬೇಡ. ಇತರೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

Leave A Reply

Your email address will not be published.

error: Content is protected !!