ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ ; ಮಾಜಿ ಸಚಿವ ಕಿಮ್ಮನೆ ರತ್ನಾಕರ್

0 283

ಹೊಸನಗರ : ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಕಾಂಗ್ರೆಸ್ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳು ಶೇ.98ರಷ್ಟು ಫಲಾನುಭವಿಗಳಿಗೆ ತಲುಪಿವೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ಇಲ್ಲಿನ ಕಾಂಗ್ರೆಸ್ ಕಛೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.24 ರಂದು ಶಿವಮೊಗ್ಗದ ಫ್ರೀಡಂಪಾರ್ಕ್‌ನಲ್ಲಿ ಯೋಜನೆಯ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೆಲ ವೈಯಕ್ತಿಕ ತಾಂತ್ರಿಕ ಕಾರಣಗಳಿಂದ ಗ್ಯಾರಂಟಿ ಯೋಜನೆಯ ಲಾಭ ದೊರೆಯದಿದ್ದವರಿಗೆ ಇಲ್ಲಿ ತೊಂದರೆಗಳನ್ನು ನಿವಾರಿಸಲು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗುವುದು. ಪಕ್ಷದ ಹಿರಿಯ ನಾಯಕರು ಅಂದು ಪಾಲ್ಗೊಳ್ಳಲಿದ್ದು, ಯೋಜನೆಯ ಫಲಾಭವಿಗಳು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಬಿಜೆಪಿ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲು ಹಿಂದೆ ವಿಫಲವಾಗಿತ್ತು. ಈಗ ಗ್ಯಾರಂಟಿ ಯೋಜನೆಗಳ ಕುರಿತು ಅಪಹಾಸ್ಯ ಮಾಡಿತ್ತು. ಯಾರೇನೇ ಹೇಳಿದರೂ ಬಡವರಿಗೆ ಯೋಜನೆಯ ಲಾಭ ದೊರೆತಿದೆ. ಈಗ ಬಿಜೆಪಿ ಸಹಾ ಗ್ಯಾರಂಟಿ ಮಾದರಿಯಲ್ಲಿ ಯೋಜನೆಗಳನ್ನು ಜನರ ಮುಂದಿಡಲು ಆರಂಭಿಸಿದೆ ಎಂದರು.

ಈ ಬಾರಿ ನಡೆಯುವ ಲೋಕಸಭಾ ಚುನಾವಣೆ ಬಹುತೇಕ ಕಡೆಯ ಚುನಾವಣೆ ಎನ್ನುವುದು ನನ್ನ ಅಭಿಪ್ರಾಯ. ಬಳಿಕ ನಿರಂಕುಶ ಆಡಳಿತದತ್ತ ದೇಶ ಸಾಗುತ್ತಿದೆ. ಚುನಾವಣಾ ಆಯೋಗ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಸರಕಾರ ಹಸ್ತಕ್ಷೇಪ ನಡೆಸುತ್ತಿದೆ. ಇವಿಎಂ ಬಳಕೆಯಿಂದ ಬಿಜೆಪಿಗೆ ಅನುಕೂಲವಾಗಿದೆ ಎಂದು ಅವರು ದೂರಿದರು.

ದೇಶ ಕಳೆದ 10 ವರ್ಷಗಳಲ್ಲಿ ಆರ್ಥಿಕವಾಗಿ ಸಂಕಷ್ಟದತ್ತ ಸಾಗುತ್ತಿದೆ. ಡಾಲರ್ ವಿರುದ್ಧರೂಪಾಯಿ ಮೌಲ್ಯ ಕುಸಿದಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಗಗನದತ್ತ ಮುಖ ಮಾಡಿವೆ. ಕೋಮು ಸಂಘರ್ಷವನ್ನು ಭಿತ್ತಿ ಆಡಳಿತದ ಚುಕ್ಕಾಣಿ ಹಿಡಿಯುತ್ತಿದೆ. ದೇಶದ ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ಬಿ.ಜಿ.ನಾಗರಾಜ್, ಸದಾಶಿವ ಶ್ರೇಷ್ಟಿ, ಮಹಾಬಲರಾವ್, ಬಿ.ಆರ್.ಪ್ರಭಾಕರ, ಬಿ.ಜಿ. ಚಂದ್ರಮೌಳಿ, ಗಣೇಶ್, ಬೃಂದಾವನ ಪ್ರವೀಣ್, ಚಂದ್ರಮೂರ್ತಿ, ಲಿಂಗಪ್ಪ, ಇಕ್ಬಾಲ್, ಜಯನಗರ ಗುರು, ಟೀಕಪ್ಪ, ಲೇಖನಮೂರ್ತಿ, ಉಬ್ಬೆದುಲ್ಲಾ, ನೇತ್ರಾ ಶಾಹಿನ, ಮತ್ತಿತರರು ಇದ್ದರು.

ಚುನಾವಣಾ ಬಾಂಡ್‌ ಅಸಂವಿಧಾನಿಕ ಎಂದು ಇತ್ತೀಚೆಗೆ ತೀರ್ಪು ಬಂದಿದೆ. ಇದೊಂದು ದೊಡ್ಡ ಭ್ರಷ್ಠಾಚಾರವಾಗಿದೆ. ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು.
– ಕಿಮ್ಮನೆ ರತ್ನಾಕರ್, ಮಾಜಿ ಸಚಿವ

Leave A Reply

Your email address will not be published.

error: Content is protected !!