ಶಾಂತಿಯುತವಾಗಿ ಸಂಪನ್ನಗೊಂಡ ದತ್ತ ಜಯಂತಿ ಉತ್ಸವ

0 215

ಚಿಕ್ಕಮಗಳೂರು: ವಿಶ್ವಹಿಂದೂ ಪರಿಷತ್-ಬಜರಂಗದಳ ವತಿಯಿಂದ ಆಯೋಜಿಸಲಾಗಿದ್ದ ಈ ಬಾರಿಯ ದತ್ತ ಜಯಂತಿ (Datta Jayanthi) ಉತ್ಸವ ಶಾಂತಿಯುತವಾಗಿ ಸಂಪನ್ನಗೊಂಡಿತು.

ರಾಜ್ಯದ ಮೂಲೆ ಮೂಲೆಗಳಿಂದ ದತ್ತಾತ್ರೇಯನ ಭಜನೆ ಮಾಡುತ್ತ ದತ್ತಪೀಠಕ್ಕೆ ಆಗಮಿಸಿದ ಮಾಲಾಧಾರಿಗಳು, ಹೋಮ, ಹವನ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇರುಮುಡಿ ಅರ್ಪಿಸಿ ಹಿಂತಿರುಗಿದರು.

ಪಾದುಕೆಗಳ ದರ್ಶನ ಭಕ್ತರು, ಬ್ಯಾರಿಕೇಡ್‌ನಲ್ಲಿ ಸರತಿಯಲ್ಲಿ ಸಾಗಿ ಪಾದುಕೆಗಳ ದರ್ಶನ ಪಡೆದರು. ಗುಹೆ ಎದುರು ಭಾಗದ ಆವರಣದಲ್ಲೇ ನಡೆದ ಹೋಮ ಹವನಗಳನ್ನು ಕಣ್ತುಂಬಿಕೊಂಡು ಹೊರ ಆವರಣದ ಶೆಡ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅಲ್ಲಿಯೇ ಇರುಮುಡಿ ಅರ್ಪಿಸಿದರು.

ಸರ್ಕಾರದಿಂದ ನೇಮಿಸಲ್ಪಟ್ಟ ಶ್ರೀಧರ್ ಭಟ್ ಕುಡಿನೆಲ್ಲಿ ಮತ್ತು ಶಿವರಾಂ ಭಟ್ ಶೃಂಗೇರಿ ಅವರುಗಳು ಪಾದುಕೆಗಳಿಗೆ ಪೂಜೆ ನೆರವೇರಿಸಿದರೆ, ಪ್ರವೀಣ್ ಭಟ್ ಕಮ್ಮರಡಿ, ಖಾಂಡ್ಯ ಪ್ರವೀಣ್, ಸುಮಂತ್ ನೆಮ್ಮಾರ್ ಪುರೋಹಿತರ ತಂಡ ಹೋಮ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಇದೇ ವೇಳೆ ನಡೆದ ಧಾರ್ಮಿಕ ಸಭೆಯಲ್ಲಿ ಕಡೂರು ಎಳನಡು ಮಠದ ಶ್ರೀ ಜ್ಞಾನ ಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ಬೀರೂರಿನ ಬಾಳೆಹೊನ್ನೂರು ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಶ್ರೀ ಶೈಲ ಶಾಖಾ ಮಠದ ಶ್ರೀ ಚನ್ನಮಲ್ಲಿಜಾರ್ಜುನ ಸ್ವಾಮೀಜಿ, ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ ಶ್ರೀ ಜಯಬಸವಾನಂದ ಸ್ವಾಮೀಜಿ ಭಾಗವಹಿಸಿ ಆಶೀರ್ವಚನ ನೀಡಿದರು.

ವಿಶ್ವಹಿಂದೂ ಪರಿಷತ್ ಅಖಿಲ ಭಾರತ ಸಹಕಾರ್ಯದರ್ಶಿ ಶಂಕರ್ ಗಾಯ್ಕರ್, ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ್, ಆಧ್ಯಾತ್ಮಿಕ ಗುರು ದ್ವಾರಕನಾಥ್, ಹೈಕೋರ್ಟ್ ವಕೀಲ ಜಗದೀಶ್ ಬಾಳಿಗ, ಚೈತನ್ಯಮಯಿ ಡಾ.ಮಾತಾ ಅಂಬಿಕಾ ಇತರರು ಉತ್ಸವದಲ್ಲಿ ಭಾಗವಹಿಸಿದರು.

ಮಾಜಿ ಶಾಸಕ ಸಿ.ಟಿ.ರವಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಇತರರು ಭಾಗವಹಿಸಿದ್ದರು.

ಕಡೂರು ತಾಲ್ಲೂಕು ಹಾಗೂ ಹಾಸನ ಜಿಲ್ಲೆಗಳಿಂದ ನೂರಾರು ವಾಹನಗಳಲ್ಲಿ ಮಾಲಾಧಾರಿಗಳು ಏಕ ಕಾಲದಲ್ಲಿ ಪೀಠದತ್ತ ಆಗಮಿಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನ ಗಿರಿ ರಸ್ತೆಯಲ್ಲಿ ಆಗಾಗಾ ಟ್ರಾಫಿಕ್ ಜಾಮ್ ಉಂಟಾಯಿತು.

ದತ್ತಪೀಠದ ಮಾರ್ಗದುದ್ದಕ್ಕೂ ಹಾಗೂ ಪೀಠದ ಪರಿಸರದಲ್ಲಿರುವ ಎಲ್ಲ ಗೋರಿಗಳ ಬಳಿಯೂ ಬಿಗಿ ಪೊಲೀಸ್ ಪಹರೆ ಏರ್ಪಡಿಸಲಾಗಿತ್ತು. ನಗರದ ಸೂಕ್ಷ್ಮ ಪ್ರದೇಶಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು.

ಜಿಲ್ಲಾಧಿಕಾರಿ ಸಿ.ಎಸ್.ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಆಮಟೆ ಪೀಠದಲ್ಲೇ ಇದ್ದರು.

ನ್ಯಾಯಾಲಯದ ಆದೇಶದಂತೆ ಕಳೆದ ಬಾರಿ ರಾಜ್ಯ ಸರ್ಕಾರ ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಪೀಠದಲ್ಲಿ ನಡೆದ ಎಲ್ಲಾ ಪೂಜಾ ಕೈಂಕರ್ಯಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗೂ ಸಮಿತಿ ಉಸ್ತುವಾರಿಯಲ್ಲೇ ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೇಮಂತ್ ಮತ್ತಿತರೆ ೭ ಮಂದಿ ಸದಸ್ಯರು ಲಗುಬಗೆಯಿಂದ ಎಲ್ಲಾ ಪೂಜಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.

Leave A Reply

Your email address will not be published.

error: Content is protected !!