ಕಳಸ: ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞ ವೈದ್ಯರು ಇಲ್ಲದ ಪರಿಣಾಮ ಹೆರಿಗೆಗೆಂದು ಬಂದಿದ್ದ ಗರ್ಭಿಣಿಯನ್ನು ಬೇರೆ ಆಸ್ಪತ್ರೆಗೆ ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ರಸ್ತೆಗೆ ಗುಂಡಿಯಿಂದಾಗಿ ಆ್ಯಂಬುಲೆನ್ಸ್ ಕೆಟ್ಟುನಿಂತು ಗರ್ಭಿಣಿ ಮಹಿಳೆ ಗಂಟೆಗಟ್ಟಲೆ ನೋವಿನಿಂದ ನರಳಿದ ಮನಕಲುಕುವ ಘಟನೆಯೊಂದು ಕಳಸ ಪಟ್ಟಣದಲ್ಲಿ ನಡೆದಿದೆ.
ಹೆರಿಗೆ ನೋವಿನಿಂದ ಬಳಲುತ್ತಿದ್ದ ಕೂಲಿಕಾರ್ಮಿಕ ವರ್ಗದ ಮಹಿಳೆಯೊಬ್ಬರನ್ನು ಕುಟುಂಬಸ್ಥರು ಭಾನುವಾರ ಕಳಸ ಪಟ್ಟಣದ ಸರಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರು ಇಲ್ಲ ಎಂದು ಸಿಬ್ಬಂದಿ ತಿಳಿಸಿದ್ದರಿಂದ ಕುಟುಂಬಸ್ಥರು ಆಸ್ಪತ್ರೆಯ 108 ಆ್ಯಂಬುಲೆನ್ಸ್ ನಲ್ಲಿ ಗರ್ಭಿಣಿಯನ್ನು ಕೊಪ್ಪ ಪಟ್ಟಣಕ್ಕೆ ಕರೆದೊಯ್ಯಲು ಮುಂದಾಗಿದ್ದಾರೆ. ಕುಟುಂಬಸ್ಥರು ಗರ್ಭಿಣಿಯನ್ನು ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಕಳಸ ಪಟ್ಟಣ ಸಮೀಪದ ಹಳುವಳ್ಳಿ ಎಂಬಲ್ಲಿ ರಸ್ತೆಯಲ್ಲಿದ್ದ ಗುಂಡಿಗಿಳಿದ ವೇಳೆ ಆ್ಯಂಬುಲೆನ್ಸ್ ನ ಆಕ್ಸೆಲ್ ಬ್ಲೇಡ್ ಕಟ್ಟಾಗಿ ಕೆಟ್ಟು ನಿಂತಿದೆ. ಚಾಲಕ ಎಷ್ಟೇ ಪ್ರಯತ್ನ ಮಾಡಿದರೂ ಆ್ಯಂಬುಲೆನ್ಸ್ ಸರಿಯಾಗಿಲ್ಲ. ಈ ವೇಳೆ ಆ್ಯಂಬುಲೆನ್ಸ್ ನಲ್ಲಿ ಗರ್ಭಿಣಿ ನೋವಿನಿಂದ ನರಳಾಡುತ್ತಲೇ ಇದ್ದರೆಂದು ತಿಳಿದು ಬಂದಿದೆ.
ಈ ಘಟನೆ ಸಂಬಂಧ ಸಾರ್ವಜನಿಕರು ಕ್ಷೇತ್ರದ ಶಾಸಕರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.