Mysore Dasara | ಬೆಟ್ಟದಿಂದ ಬಟ್ಟಲಿಗೆ ; ಚಿಕ್ಕಮಗಳೂರು ಜಿಲ್ಲೆಗೆ ರಾಜ್ಯದ ಅತ್ಯುತ್ತಮ ಸ್ತಬ್ಧಚಿತ್ರ ಪುರಸ್ಕಾರ

0 1,852

ಚಿಕ್ಕಮಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪಂಚಾಯತಿಯ ವತಿಯಿಂದ ಜಿಲ್ಲೆಯನ್ನು ಪ್ರತಿನಿಧಿಸಿದ ಬೆಟ್ಟದಿಂದ ಬಟ್ಟಲಿಗೆ ಶೀರ್ಷಿಕೆಯಲ್ಲಿ ವಿಶ್ವಕರ್ಮ ಆರ್ಟ್ ಕ್ರೀಯೇಶನ್ ಸಂಸ್ಥೆಯು ನಿರ್ಮಾಣ ಮಾಡಿದ ಸ್ಥಬ್ಧಚಿತ್ರವು ರಾಜ್ಯದ ಪ್ರತಿಷ್ಟಿತ ಅತ್ಯತ್ತಮ ಸ್ತಬ್ಧ ಚಿತ್ರಗಳಲ್ಲಿ ಒಂದಾಗಿ ಆಯ್ಕೆಯಾಗಿದೆ.

ಈ ವರ್ಷದ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳು ಹಾಗೂ ವಿವಿಧ ಇಲಾಖೆಗಳು ಸೇರಿದಂತೆ ಸುಮಾರು 49 ಸ್ತಬ್ಧ ಚಿತ್ರಗಳು ಭಾಗವಹಿಸಿದ್ದವು. ಅವುಗಳಲ್ಲಿ ಅತ್ಯತ್ತಮ ಮೂರು ಸ್ತಬ್ಧಚಿತ್ರಗಳನ್ನು ತೀರ್ಪುಗಾರರು ಆಯ್ಕೆ ಮಾಡಿದ್ದು ಅವುಗಳಲ್ಲಿ ಚಿಕ್ಕಮಗಳೂರಿನ ಸ್ತಬ್ಧಚಿತ್ರವೂ ಒಂದಾಗಿದೆ.

ವಿಶೇಷತೆ:
“ಬೆಟ್ಟದಿಂದ ಬಟ್ಟಲಿಗೆ” ಶೀರ್ಷಿಕೆಗೆ ಅನ್ವರ್ಥವಾಗುವಂತೆ ಕಲಾವಿದರು ಜಿಲ್ಲೆಯ ಮಲೆನಾಡಿನ ಪ್ರಾಕೃತಿಕ ಸೊಬಗನ್ನು ಮರುಸೃಷ್ಟಿ ಮಾಡಿದ್ದಾರೆ. ಬೆಟ್ಟದ ತಪ್ಪಲಿನ ಅಡಿಕೆ ಮರಗಳು, ತೆಂಗಿನ ಮರಗಳು, ಮೆಣಸಿನ ಬಳ್ಳಿ, ಏಲಕ್ಕಿ ಗಿಡಗಳ ಹಸಿರು ಛಾವಣಿಯಡಿಯಲ್ಲಿರುವ ಕಾಫಿ ತೋಟದ ಮನೆ. ಅಲ್ಲಿ ಗೌಡ ಮತ್ತು ಗೌಡತಿ ದಂಪತಿಗಳು ಕಾಫಿಯ ಸಂಸ್ಕರಣ ಕಾರ್ಯವನ್ನು ಮಾಡಿಸುತ್ತಿರುವ, ಕಾರ್ಮಿಕ ಮಹಿಳೆ ಕಣದಲ್ಲಿ ಮೆಣಸನ್ನು ಪ್ರತ್ಯೇಕಿಸುತ್ತಿರುವ ಚಿತ್ರಣ ನಮ್ಮ ಮಲೆನಾಡಿನ ಕೃಷಿಕರ ನಿತ್ಯ ಜೀವನದ ನೈಜತೆಗೆ ಹತ್ತಿರವಾಗಿತ್ತು. ಕಾಫಿ ಬೀಜಗಳ ರಾಶಿಗಳ ಮಧ್ಯೆ ಸಾಂಪ್ರದಾಯಿಕವಾದ ಕಾಫಿ ಕುಡಿಯುವ ಹಿತ್ತಾಳೆಯ ಬಟ್ಟಲು ಮತ್ತು ಲೋಟ, ಅದರಲ್ಲಿರುವ ಕಾಫಿಯಿಂದ ಹೊಮ್ಮುತ್ತಿರುವ ಬಿಸಿ ಬಿಸಿ ಹಬೆ ನೋಡುಗರಿಗೆ ಕಾಫಿಯನ್ನು ಆಸ್ವಾದಿಸುವ ಆಸೆಯನ್ನು ಹುಟ್ಟಿಸುವಷ್ಟು ಅಮೋಘವಾಗಿತ್ತು.

ಪಶ್ಚಿಮ ಘಟ್ಟಗಳ ಶೋಲಾ ಗುಡ್ಡಗಳಲ್ಲಿ, ಪದರಕಲ್ಲುಗಳ ರಾಶಿಗಳ ಮಧ್ಯೆ, ಹರಡಿರುವ ಮಂಜಿನ ನಡುವೆ ಕಾಫಿಬೀಜ ಬಿಡಿಸುತ್ತಿರುವ ಸುಂದರ ಮಲೆನಾಡ ತರುಣಿ ಸ್ತಬ್ಧ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದಳು. ಹೀಗೆ ಬೆಟ್ಟದ ತಪ್ಪಲಿನಲ್ಲಿ ಬೆಳೆದ ಕಾಫಿ ಗಿಡದಿಂದ ಕಿತ್ತು ಸಂಸ್ಕರಣೆಗೊಂಡು ಬಟ್ಟಲು ಸೇರಿ ಕಾಫಿ ಪ್ರಿಯರು ಕಾಫಿ ಆಸ್ವಾದಿಸುವವರೆಗಿನ ಚಿತ್ರಣ ಒಟ್ಟಾರೆಯಾಗಿ ಮಲೆನಾಡಿನ ಕೃಷಿಕರ ಬದುಕು ಮತ್ತು ಜೀವನವನ್ನು ಪ್ರತಿಬಿಂಬಿಸಿತ್ತಿತ್ತು.

ಬೆಟ್ಟದಿಂದ ಬಟ್ಟಲಿಗೆ ಕಾಫಿ ಪಯಣಿಸಿದ ಯಶೋಗಾಥೆ ದೃಶ್ಯ ಕಾವ್ಯದ ರೀತಿಯಲ್ಲಿ ಮೂಡಿಬಂದುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು.
ಸ್ತಬ್ಧ ಚಿತ್ರದಲ್ಲಿ ಮಾ|| ಸುವಿದ್ ವಿಶ್ವಕರ್ಮ ನಿರ್ಮಿಸಿದ ಕೃತಕ ಮಂಜಿನ ಸೃಷ್ಟಿ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಶಿಲ್ಪ ಆಚಾರ್ಯರ ಮಾರ್ಗದರ್ಶನದಲ್ಲಿ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೃತಕವಾಗಿ ನಿರ್ಮಿಸಿದ ಕಾಫಿ ಬೀಜ, ಮೆಣಸಿನ ಬಳ್ಳಿ, ಬಾಳೆಗಿಡಗಳು, ಕೆಸವಿನ ಗಿಡಗಳು, ಅಡಿಕೆ ಮರಗಳು, ತೆಂಗಿನ ಮರಗಳು, ಗೌಡ ಗೌಡತಿಯ ಹಾಗೂ ಕಾಫಿ ಹಣ್ಣು ಬಿಡಿಸುತ್ತಿರುವ ಹೆಣ್ಣುಮಗಳ ದೇಸಿಯ ಉಡುಗೆ ತೊಡುಗೆಗಳು ನೋಡುಗರ ಮನೆಸೂರೆಗೊಂಡವು.

Leave A Reply

Your email address will not be published.

error: Content is protected !!