ಎನ್.ಆರ್ ಪುರ: ಹಾಡಹಗಲೇ ಬೈಕ್ ಸವಾರರಿಬ್ಬರನ್ನು ಕೋವಿಯಿಂದ ಗುಂಡಿಕ್ಕಿ ಹತ್ಯೆಗೈದ ಘಟನೆ ತಾಲೂಕಿನ ಬಾಳೆಹೊನ್ನೂರು ಸಮೀಪದ ಚಂದ್ರುಳ್ಳಿಬಿದರೆ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಬಾಳೆಹೊನ್ನೂರು ಗ್ರಾಮದ ಹಳ್ಳಿಬೈಲು ನಿವಾಸಿಗಳಾದ ಪ್ರಕಾಶ್(28) ಮತ್ತು ಪ್ರವೀಣ್(30) ಹತ್ಯೆಯಾದವರು.
ಕೊಲೆ ಆರೋಪಿಯನ್ನು ಚಿಕ್ಕಮಗಳೂರು ತಾಲೂಕಿನ ಉಜ್ಜಯಿನಿ ಗ್ರಾಮದ ರಮೇಶ್ ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕೆಲಸದ ನಿಮಿತ್ತ ಪ್ರವೀಣ್ ಜೊತೆ ಒಂದೇ ಬೈಕ್‍ನಲ್ಲಿ ನಾನು ಹಾಗೂ ನನ್ನ ಸಹೋದರ ಪ್ರಕಾಶ್ ಬಾಳೆಹೊನ್ನೂರಿಗೆ ಹೊರಟಿದ್ದೆವು. ಗ್ರಾಮದ ತಿರುವಿನಲ್ಲಿ ಹೋಗುತ್ತಿದ್ದ ವೇಳೆ ರಮೇಶ್ ಹಾರಿಸಿ ಗುಂಡು ಪ್ರವೀಣ್ ಹಾಗೂ ನನ್ನ ಸಹೋದರ ಪ್ರಕಾಶ್‍ಗೆ ತಗುಲಿ ಇಬ್ಬರು ಮೃತಪಟ್ಟಿದ್ದಾರೆ. ಬಂದೂಕು ನನಗೆ ತಗುಲದ ಪರಿಣಾಮ ಬದುಕುಳಿದಿದ್ದೇನೆ.
– ಪ್ರಶಾಂತ್, ಮೃತ ಪ್ರಕಾಶ್ ಸಹೋದರ
‘ಕ್ಷುಲ್ಲಕ ವಿಚಾರಕ್ಕೆ ಅಂಗನವಾಡಿ ಆಯಾ ಮಮತಾ ಎಂಬವರೊಂದಿಗೆ ಜಗಳವಾಡುತ್ತಿದ್ದ ರಮೇಶ್ ಕುಪಿತನಾಡಿ ಬಂದೂಕಿನಿಂದ ಆಕೆಯತ್ತ ಗುಂಡು ಹಾರಿಸಿದ್ದಾನೆ. ಆದರೆ ಗುಂಡು ಆಕೆಗೆ ತಗುಲದೇ ಪಕ್ಕದಲ್ಲೇ ಇದ್ದ ರಸ್ತೆಯಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದವರಿಗೆ ತಗುಲಿದೆ. ಗುಂಡು ತಗುಲಿ ಬೈಕ್‍ನಲ್ಲಿದ್ದ ಪ್ರವೀಣ್, ಪ್ರಕಾಶ್ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ರಮೇಶ್ ಮಾನಸಿಕ ಅಸ್ವಸ್ಥನಾಗಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಹೆಚ್ಚಿನ ಮಾಹಿತಿ ತನಿಖೆ ಬಳಿಕ ತಿಳಿಯಲಿದೆ’.
– ಉಮಾಪ್ರಶಾಂತ್, ಎಸ್ಪಿ