ಶಿವಮೊಗ್ಗ:ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ನಾಟಿ ಮಾಡಿದ ಭತ್ತದ ಬೆಳೆಗಳು ಈಗ 45ರಿಂದ 75 ದಿನಗಳ ಅವಧಿಯ ಬೆಳವಣಿಗೆಯ ಹಂತದಲ್ಲಿವೆ. ಆದರೆ, ಇತ್ತೀಚಿನ ತುಂತುರು ಮಳೆ ಹಾಗೂ ತಾಪಮಾನ ಬದಲಾವಣೆಯಿಂದ ವಾತಾವರಣದಲ್ಲಿ ಆರ್ದ್ರತೆ ಹೆಚ್ಚಿದ್ದು, ಕೆಲವು ಪ್ರದೇಶಗಳಲ್ಲಿ ಕೀಟ ಮತ್ತು ರೋಗಗಳ ಪ್ರಾದುರ್ಭಾವ ಕಂಡುಬರುತ್ತಿದೆ. ಇದನ್ನು ತಡೆಗಟ್ಟಲು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ರೈತರಿಗೆ ನಿರ್ವಹಣಾ ಕ್ರಮಗಳನ್ನು ಸಲಹೆ ನೀಡಿದ್ದಾರೆ.
ಎಲೆ ಸುರುಳಿ/ಕೊಳವೆ ಹುಳು
ಈ ಹುಳುಗಳು ಎಲೆಗಳನ್ನು ಮಡಚಿ ಒಳಗಡೆ ತಿನ್ನುತ್ತವೆ.
ನಿರ್ವಹಣೆ:
- ಸಾರಜನಕದ ಉಪಯೋಗವನ್ನು ಕಡಿಮೆಗೊಳಿಸಿ
- ಬದುಗಳನ್ನು ಸ್ವಚ್ಛವಾಗಿರಿಸಿ
- ಕ್ವಿನಾಲ್ ಫಾಸ್ 2 ಮಿ.ಲಿ. ಅಥವಾ ಇಂಡಾಕ್ಸಿಕಾರ್ಬ್ 14.5 ಎಸ್‌ಸಿ 0.5 ಮಿ.ಲಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು
ಕಾಂಡ ಕೊರೆಯುವ ಹುಳು
ಕಾಂಡ ಒಣಗುವುದು, ಬಿಳಿ ತೆನೆ ಕಾಣುವುದು ಮತ್ತು ಕಾಳು ಜೊಳ್ಳಾಗುವ ಲಕ್ಷಣಗಳು ಕಂಡುಬರುತ್ತವೆ.
ನಿರ್ವಹಣೆ:
- ಕ್ಲೋರೋಪೈರಿಪಾಸ್ 2 ಮಿ.ಲಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು
ಕಂದು ಜಿಗಿ ಹುಳು
ಈ ಹುಳುಗಳು ಕಾಂಡದ ಬುಡದಲ್ಲಿ ರಸ ಹೀರುತ್ತವೆ. ಸಸಿಗಳು ಮೊದಲು ಹಳದಿ ಬಣ್ಣಕ್ಕೆ ತಿರುಗಿ ನಂತರ ಒಣಗುತ್ತವೆ.
ನಿರ್ವಹಣೆ:
- ಸಾರಜನಕದ ಪ್ರಮಾಣ ಕಡಿಮೆಗೊಳಿಸಿ
- ಗದ್ದೆಯಲ್ಲಿ ನೀರು ಹರಿಸಿ ಗಾಳಿಯಾಡುವಂತೆ ಪಾತಿ ಮಾಡಬೇಕು
- ಕ್ಲೋರೋಪೈರಿಪಾಸ್/ಪೋಸಲನ್ 2 ಮಿ.ಲಿ. ಅಥವಾ ಇಮಿಡಾ ಕ್ಲೋಪ್ರಿಡ್ 0.5 ಮಿ.ಲಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಬುಡಕ್ಕೆ ಸಿಂಪಡಿಸಬೇಕು
ಬೆಂಕಿ ರೋಗ
ಎಲೆ ಮತ್ತು ಕಾಂಡದ ಮೇಲೆ ಕದಿರಿನ ಆಕಾರದ ಚುಕ್ಕೆಗಳು ಕಾಣಿಸುತ್ತವೆ. ಕೊನೆಯಲ್ಲಿ ಬೆಳೆ ಸುಟ್ಟಂತೆ ಕಾಣುತ್ತದೆ.
ನಿರ್ವಹಣೆ:
- ಟ್ರೈಸೈಕ್ಲೋಕೋಲ್ 0.6 ಗ್ರಾಂ ಅಥವಾ ಕಿಟಾಜಿನ್ 1 ಮಿ.ಲಿ. ಅಥವಾ ಕಾರ್ಬನ್ ಡೈಜಿಮ್ 1 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು
ಎಲೆ ಕವಚದ ಮಚ್ಚೆ ರೋಗ
ಎಲೆಯ ಮೇಲ್ಮೈಯಲ್ಲಿ ಅಂಡಾಕಾರದ ಬೂದಿ ಬಣ್ಣದ ಮಚ್ಚೆಗಳು ಕಾಣುತ್ತವೆ.
ನಿರ್ವಹಣೆ:
- ಸಾರಜನಕದ ಪ್ರಮಾಣ ಕಡಿಮೆಗೊಳಿಸಿ
- ಕಾರ್ಬನ್ ಡೈಜಿಮ್ 50WP (1 ಗ್ರಾಂ), ಮ್ಯಾಂಕೋಜಿಬ್ 75WP (2 ಗ್ರಾಂ) ಅಥವಾ ಹೆಕ್ಸಾಕೋನಾಜೋಲ್ 5SC (2 ಮಿ.ಲಿ.) ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು
ದುಂಡಾಣು ಎಲೆ ಅಂಗಮಾರಿ ರೋಗ
ಎಲೆಯ ನರಗಳ ಮಧ್ಯದಲ್ಲಿ ಹಳದಿ ಅಥವಾ ಕಿತ್ತಳೆ ಬಣ್ಣದ ಉದ್ದನೆಯ ಮಚ್ಚೆಗಳು ಕಾಣುತ್ತವೆ.
ನಿರ್ವಹಣೆ:
- ಸ್ಟ್ರೇಪ್ಟೋಸೈಕ್ಲಿನ್ 0.6 ಗ್ರಾಂ ಪ್ರತಿ 16 ಲೀಟರ್ ನೀರಿಗೆ
- ತಾಮ್ರದ ಆಕ್ಸಿಕ್ಲೋರೈಡ್ 1 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಮಿಶ್ರಣ ಸಿಂಪಡಿಸಬೇಕು
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಸಮೀಪದ ರೈತರ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಸಾವು !
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650