ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಗೆ : ಸಿ.ಎಸ್. ಚಂದ್ರಭೂಪಾಲ್

Written by Koushik G K

Published on:

ಶಿವಮೊಗ್ಗ– ಜಿಲ್ಲೆಯಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗುತ್ತಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಲು ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಅನುಷ್ಟಾನ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಎಲ್ಲರ ಸಮನ್ವಯ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಅಧಿಕಾರಿಗಳಿಂದ ಹಲವು ಸಲಹೆಗಳು

ಸಭೆಯಲ್ಲಿ ಉಪಾಧ್ಯಕ್ಷ ಶಿವಣ್ಣ ಹಾಗೂ ಸದಸ್ಯ ಶಿವಾನಂದ ನ್ಯಾಯಬೆಲೆ ಅಂಗಡಿಗಳ ಜಾಗೃತಿ ಸಮಿತಿ ರಚನೆ, ಅವರ ಪಾತ್ರ, ಸಮಿತಿ ಸದಸ್ಯರ ಪಟ್ಟಿ ಹಾಗೂ ಸಾರ್ವಜನಿಕರು ದೂರು ನೀಡಲು ಆಹಾರ ಇಲಾಖೆಯ ಟೋಲ್‌ಫ್ರೀ ಸಂಖ್ಯೆಯನ್ನು ಪ್ರತಿಯೊಂದು ಅಂಗಡಿಯಲ್ಲಿ ಬರೆಸುವಂತೆ ಸೂಚಿಸಿದರು. ಸಾಗರ ಹಾಗೂ ತೀರ್ಥಹಳ್ಳಿಗೆ ಬಸ್ ಸೇವೆ, ಸಿಟಿ ಬಸ್‌ಗಳ ವಿಸ್ತರಣೆ, ಶಕ್ತಿ ಯೋಜನೆ ಕುರಿತಂತೆ ಕೆಎಸ್‌ಆರ್‌ಟಿಸಿ ಜೊತೆ ಪ್ರತ್ಯೇಕ ಸಭೆ ನಡೆಸಬೇಕೆಂದು ಆಗ್ರಹಿಸಿದರು.

ಯೋಜನೆಗಳ ಪ್ರಗತಿ ವಿವರ

  • ಗೃಹಲಕ್ಷ್ಮಿ ಯೋಜನೆ: ಜಿಲ್ಲೆಯ 4,01,790 ಮಹಿಳೆಯರಲ್ಲಿ 94.63% ನೋಂದಣಿ ಪೂರ್ಣಗೊಂಡಿದ್ದು, ಜೂನ್‌ವರೆಗೂ 3,08,416 ಮಂದಿಗೆ ಹಣ ಪಾವತಿಸಲಾಗಿದೆ (ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ).
  • ಅನ್ನಭಾಗ್ಯ ಯೋಜನೆ: ಫೆಬ್ರವರಿಯಿಂದ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ವಿತರಣೆ; 13,68,324 ಜನರಿಗೆ 360.54 ಕೋಟಿ ರೂ. ವೆಚ್ಚ (ಆಹಾರ ಇಲಾಖೆ).
  • ಶಕ್ತಿ ಯೋಜನೆ: 5.29 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿ, ನಿಗಮಕ್ಕೆ 3,797.98 ಕೋಟಿ ರೂ. ಆದಾಯ (ಕೆಎಸ್‌ಆರ್‌ಟಿಸಿ).
  • ಗೃಹಜ್ಯೋತಿ ಯೋಜನೆ: 4,69,298 ಕುಟುಂಬಗಳು ಲಾಭ ಪಡೆದಿದ್ದು, ಒಟ್ಟು ವೆಚ್ಚ 48,104.25 ಕೋಟಿ ರೂ. (ಮೆಸ್ಕಾಂ).
  • ಯುವನಿಧಿ ಯೋಜನೆ: 6,894 ಫಲಾನುಭವಿಗಳಿಗೆ 5.59 ಕೋಟಿ ರೂ. ಪಾವತಿ; ಹೆಚ್ಚಿನ ನೋಂದಣಿಗೆ ಪ್ರೇರೇಪಿಸುವ ಪೋಸ್ಟರ್ ಬಿಡುಗಡೆ (ಉದ್ಯೋಗ ಇಲಾಖೆ).

ಸಮಿತಿಗಳ ಸಮಸ್ಯೆಗಳ ಪ್ರಸ್ತಾಪ

ಸೊರಬ ತಾಲ್ಲೂಕು ಸಮಿತಿ ಸದಸ್ಯರು ಪಡಿತರ ವಿತರಣೆ ಅವಧಿ ಒಂದು ವಾರಕ್ಕೆ ಸೀಮಿತವಾಗಿರುವುದರಿಂದ ಕೂಲಿ ಕಾರ್ಮಿಕರಿಗೆ ತೊಂದರೆ ಆಗುತ್ತಿದೆ, ಕನಿಷ್ಠ 15 ದಿನ ವಿತರಣೆ ಅವಧಿ ಇರಬೇಕೆಂದರು. ಶಿವಮೊಗ್ಗ ತಾಲ್ಲೂಕು ಸಮಿತಿ ಅಧ್ಯಕ್ಷ ಹೆಚ್.ಎಂ. ಮಧು, ಸಭೆಗಳಿಗೆ ಮೆಸ್ಕಾಂ ಅಧಿಕಾರಿಗಳ ಗೈರುಹಾಜರಾತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಮುಂದಿನ ಸಭೆಗಳಿಗೆ ಎಲ್ಲಾ ಸಂಬಂಧಿತ ಅಧಿಕಾರಿಗಳು ಹಾಜರಾಗಬೇಕೆಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಉಪಾಧ್ಯಕ್ಷರು, ಸದಸ್ಯರು, ತಾಲ್ಲೂಕು ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜಿ.ಪಂ ಉಪ ಕಾರ್ಯದರ್ಶಿ ಸುಜಾತಾ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Comment