ಹಬ್ಬಗಳನ್ನು ಸೌಹಾರ್ದಯುತವಾಗಿ ಸಂಭ್ರಮಿಸಬೇಕು : ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

Written by Koushik G K

Published on:

ಶಿವಮೊಗ್ಗ– ಆಗಸ್ಟ್ 27ರಂದು ಗಣೇಶ ಚತುರ್ಥಿ ಹಾಗೂ ಸೆಪ್ಟೆಂಬರ್ 5ರಂದು ಈದ್‌ಮಿಲಾದ್ ಹಬ್ಬಗಳು ಜಿಲ್ಲೆಯಾದ್ಯಂತ ನಡೆಯಲಿದ್ದು, ಎಲ್ಲಾ ಧರ್ಮದ ಭಾಂಧವರು ಸೌಹಾರ್ದಯುತವಾಗಿ, ಶಾಂತಿ-ಸುವ್ಯವಸ್ಥೆಯೊಂದಿಗೆ ಹಬ್ಬಗಳನ್ನು ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮನವಿ ಮಾಡಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಹಬ್ಬದ ಮೆರವಣಿಗೆ ವೇಳೆ ಬೈಕ್ ರ‍್ಯಾಲಿ ನಡೆಸದಂತೆ, ಡಿಜೆ ಧ್ವನಿವರ್ಧಕ ಬಳಸದೆ ಮೆರವಣಿಗೆ ನಡೆಸುವಂತೆ ಈಗಾಗಲೇ ಆದೇಶ ನೀಡಲಾಗಿದೆ ಎಂದು ತಿಳಿಸಿದರು. ಗಣಪತಿ ವಿಸರ್ಜನೆ ಸ್ಥಳಗಳಲ್ಲಿ ತೆಪ್ಪ ವ್ಯವಸ್ಥೆ ಕಡ್ಡಾಯವಾಗಿದ್ದು, ನೀರಿಗೆ ಇಳಿಯುವವರು ಈಜು ಬಲ್ಲವರಾಗಿರಬೇಕು. ಒಮ್ಮೆ ಹೆಚ್ಚುಮಟ್ಟಿಗೆ 3-4 ಜನರಷ್ಟೇ ನೀರಿಗೆ ಇಳಿಯಲು ಅವಕಾಶವಿದ್ದು, ಲೈಫ್‌ಜೆಕೆಟ್ ಧರಿಸುವುದು ಕಡ್ಡಾಯ ಎಂದು ಹೇಳಿದರು.

ಶಾಂತಿಯುತ ಮೆರವಣಿಗೆಗೆ ಒತ್ತು

ಗಣಪತಿ ಹಾಗೂ ಈದ್‌ಮಿಲಾದ್ ಹಬ್ಬದ ಮೆರವಣಿಗೆಗಳು ಶಾಂತಿಯುತವಾಗಿ ನಡೆಯಬೇಕು. ಮತ್ತೊಂದು ಸಮುದಾಯ ಅಥವಾ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು. ಮುಖ್ಯ ಬೀದಿಗಳು ಹಾಗೂ ವರ್ತುಲಗಳಲ್ಲಿ ಸಮರ್ಪಕ ಬೀದಿ ದೀಪಗಳನ್ನು ಅಳವಡಿಸಲು ಹಾಗೂ ಸಿಸಿ ಕ್ಯಾಮೆರಾ, ಅಗತ್ಯವಿದ್ದಲ್ಲಿ ಡ್ರೋಣ ಕಣ್ಗಾವಲು ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದರು.

ಸುರಕ್ಷತಾ ಕ್ರಮಗಳು

ಗ್ರಾಮೀಣ ಪ್ರದೇಶಗಳ ಕೆರೆ, ಕಟ್ಟೆ, ಕಾಲುವೆಗಳಂತಹ ವಿಸರ್ಜನೆ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ, ಸುರಕ್ಷತೆಗಾಗಿ ಸ್ಥಳೀಯ ಅಧಿಕಾರಿಗಳು ಗಮನಹರಿಸಬೇಕು. ಶಿವಮೊಗ್ಗ, ಭದ್ರಾವತಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲು ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಲಿದೆ. ಹಬ್ಬದ ದಿನ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪೊಲೀಸ್ ಇಲಾಖೆಯ ಸಹಕಾರ

ಜಿಲ್ಲಾ ಪೊಲೀಸ‍್ ವರಿಷ್ಠಾಧಿಕಾರಿ ಜಿ.ಕೆ. ಮಿಥುನಕುಮಾರ್ ಅವರು ಮಾತನಾಡಿ, ಮೆರವಣಿಗೆ, ಉತ್ಸವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಬೀದಿದೀಪ, ರಾಜ ಬೀದಿಗಳ ಸ್ವಚ್ಛತೆ ಹಾಗೂ ಆರೋಗ್ಯ ಇಲಾಖೆ ಮೂಲಕ ಅಂಬುಲೆನ್ಸ್ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಅಗತ್ಯವಿದ್ದಲ್ಲಿ ಪೊಲೀಸರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದರು.

ಪರಿಸರ ಸ್ನೇಹಿ ವಿಗ್ರಹಗಳ ಬಳಕೆ

ಥರ್ಮೋಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಗಣಪತಿ ವಿಗ್ರಹಗಳನ್ನು ಬಳಸದಂತೆ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಮನವಿ ಮಾಡಿದರು. ಇವು ನೈಸರ್ಗಿಕವಾಗಿ ಕರಗದ ಕಾರಣ ಜಲಮೂಲ ಹಾಗೂ ಪರಿಸರಕ್ಕೆ ಹಾನಿ ಉಂಟಾಗುತ್ತದೆ ಎಂದು ಎಚ್ಚರಿಸಿದರು. ಬದಲಿಗೆ ಜೇಡಿಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ವಿಗ್ರಹಗಳನ್ನು, ಸಸ್ಯ ಆಧಾರಿತ ಬಣ್ಣಗಳಿಂದ ಅಲಂಕರಿಸಿದ ವಿಗ್ರಹಗಳನ್ನು ಬಳಸುವಂತೆ ಕರೆ ನೀಡಿದರು. “ಈ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಿ, ಹಸಿರು ಪಟಾಕಿ ಬಳಸಿ,” ಎಂದು ಅವರು ಮನವಿ ಮಾಡಿದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಉಪವಿಭಾಗಾಧಿಕಾರಿ ಸತ್ಯನಾರಾಯಣ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಜಯಲಕ್ಷ್ಮಮ್ಮ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.

Leave a Comment