ತೀರ್ಥಹಳ್ಳಿ ; ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ವಿಜ್ಞಾನ ವಿಭಾಗದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ದೀಕ್ಷಾ ಆರ್. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ತೀರ್ಥಹಳ್ಳಿಯ ಬೆಟ್ಟಮಕ್ಕಿ ನಿವಾಸಿ, ರಾಘವೇಂದ್ರ ಕಲ್ಕೂರು ಹಾಗೂ ಉಷಾ ದಂಪತಿಗಳ ಪುತ್ರಿ ದೀಕ್ಷಾ ತೀರ್ಥಹಳ್ಳಿಯ ವಾಗ್ದೇವಿ ಪಿ.ಯು. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 599 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಅಪ್ಪ-ಅಮ್ಮ ಇಬ್ಬರೂ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದು ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ತಂದೆ ರಾಘವೇಂದ್ರ ಕಲ್ಕೂರು ಮೇಗರವಳ್ಳಿ ಶಾಲೆಯಲ್ಲಿ ಶಿಕ್ಷಕ, ತಾಯಿ ಉಷಾ.ವಿ. ತೀರ್ಥಹಳ್ಳಿಯ ಬಾಲಕಿಯ ಪ್ರೌಢಶಾಲೆ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನಾನು ಪ್ರತಿದಿನ ಓದುತ್ತಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರು ಚೆನ್ನಾಗಿ ಕಲಿಸುತ್ತಿದ್ದರು. ಯಾವುದೇ ಡೌಟುಗಳಿದ್ದರು ತಿಳಿಸಿ ಕೊಡುತ್ತಿದ್ದರು. ಅಲ್ಲದೆ ಯೂಟ್ಯೂಬ್‌ನಲ್ಲಿಯೂ ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ನೋಡುತ್ತಿದ್ದೆ. ಆದ್ದರಿಂದ ವಿಷಯಗಳು ಹೆಚ್ಚು ಮನದಟ್ಟಾದವು. ಇದು ಪರೀಕ್ಷೆಯಲ್ಲಿ ಅನುಕೂಲವಾಯಿತು. ಮುಂದೆ ಇಂಜಿನಿಯರ್ ಆಗಬೇಕು ಎಂಬ ಹಂಬಲವಿದೆ.
– ದೀಕ್ಷಾ ಆರ್, ವಿದ್ಯಾರ್ಥಿನಿ
ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಮಧ್ಯಾಹ್ನ ಫಲಿತಾಂಶ ಚೆಕ್ ಮಾಡಿದಾಗ 599 ಅಂಕ ಬಂದಿರುವುದು ಕಂಡು ನಂಬಲು ಸಾಧ್ಯವಾಗಲಿಲ್ಲ. ಶಾಲೆಯಿಂದ ಅನುಮತಿ ಪಡೆದು ಮನೆಗೆ ಬಂದು ಮಗಳನ್ನು ಅಪ್ಪಿಕೊಂಡು ಸಂಭ್ರಮಿಸಿದೆ.
– ಉಷಾ ಶಿಕ್ಷಕಿ, ದೀಕ್ಷಾ ತಾಯಿ