ದಿಶಾ ಸಮಿತಿ ಸಭೆ | ರೈತರಿಗೆ ಹವಾಮಾನಾಧಾರಿತ ಬೆಳೆ ವಿಮೆ ಸಮರ್ಪಕವಾಗಿ ತಲುಪಲು ಕ್ರಮಕ್ಕೆ ಆಗ್ರಹ ; ಸಂಸದ ಬಿ.ವೈ.ರಾಘವೇಂದ್ರ

Written by Mahesha Hindlemane

Published on:

ಶಿವಮೊಗ್ಗ ; ಹವಾಮಾನಾಧಾರಿತ ಬೆಳೆ ವಿಮೆಯು ರೈತರಿಗೆ ಸಮರ್ಪಕವಾಗಿ ಲಭಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಕಳೆದ ಬಾರಿ ವಿಮೆ ಪಡೆಯುವಲ್ಲಿ ರೈತರಿಗೆ ಆದ ಅನ್ಯಾಯವನ್ನು ಸಹ ಸರಿಪಡಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಆಗ್ರಹಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಹವಾಮಾನಾಧಾರಿತ ಬೆಳೆ ವಿಮೆಯಲ್ಲಿ ಜಿಲ್ಲೆಯ ರೈತರಿಗೆ ಸಾಕಷ್ಟು ಅನ್ಯಾಯವಾಗಿದೆ. ಕಳೆದ ಸಾಲಿನಲ್ಲಿ 70-80 ಕೋಟಿ ರೂ.ನಷ್ಟು ವಿಮಾ ಮೊತ್ತ ನಷ್ಟವಾಗಿದೆ. ಆದ್ದರಿಂದ ಬೆಳೆ ನಷ್ಟವನ್ನು ನಿರ್ಧರಿಸುವ ಮಳೆ ಮಾಪನ ಕೇಂದ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು.

ಜಿಲ್ಲೆಯಲ್ಲಿ ಒಟ್ಟು 280 ಮಳೆ ಮಾಪನ ಕೇಂದ್ರಗಳಿದ್ದು ಇದರಲ್ಲಿ 112 ಅಂದರೆ ಕೇವಲ ಶೇ.40 ರಷ್ಟು ಮಾತ್ರ ಕೆಲಸ ಮಾಡುತ್ತಿವೆ ಎಂದು ವರದಿ ನೀಡಲಾಗಿದೆ. ಈ ಕೇಂದ್ರಗಳ ಬ್ಯಾಕ್ ಅಪ್ ಸ್ಟೇಷನ್‌ಗಳು ಸಹ ಸರಿ ಇಲ್ಲ. ಈ ಬಗ್ಗೆ ಅಧಿಕಾರಿಗಳು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಹಾಗೂ ರೈತರಿಗೆ ವಿಮೆ ನೀಡುವಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕಳೆದ ಬಾರಿ ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದರು.

ಹಾಗೂ ವಿಮೆ ನಿರ್ಧರಿಸುವ ಟರ್ಮ್ ಶೀಟ್ ಮಾನದಂಡವನ್ನು ಪಾರದರ್ಶಕಗೊಳಿಸಬೇಕು. ಸ್ಥಳೀಯ ಶಾಸಕರೊಂದಿಗೆ ಸಭೆ ನಡೆಸಿ ರೈತರ ಪರವಾಗಿ, ಅವರಿಗೆ ಅನುಕೂಲವಾಗುವಂತೆ ಟರ್ಮ್ ಶೀಟ್ ಅನ್ನು ಸಿದ್ದಪಡಿಸಬೇಕೆಂದು ತಿಳಿಸಿದರು.

ದಿಶಾ ಸಮಿತಿ ಸದಸ್ಯ ಗುರುಮೂರ್ತಿ ಮಾತನಾಡಿ, ಮಲೆನಾಡಿನಲ್ಲಿ ಎಲೆ ಚುಕ್ಕಿ ರೋಗದಿಂದ 40% ಬೆಳೆ ಇಲ್ಲ. ಮಧ್ಯಮ ವರ್ಗದ ರೈತರಿಗೆ ತೊಂದರೆಯಾಗುತ್ತಿದ್ದು, ಹವಾಮಾನಾಧಾರಿತ ವಿಮೆ ಕುರಿತು ತಕ್ಷಣ ಪರಿಶೀಲಿಸಿ ನಷ್ಟ ಭರಿಸುವಂತೆ ಮನವಿ ಮಾಡಿದರು. ಹಾಗೂ ಅಂಗನವಾಡಿ, ಶಾಲೆ, ಕಚೇರಿಗಳ ಮೇಲ್ಛಾವಣಿ ಸೋರಿಕೆ ಸಾಮಾನ್ಯವಾಗಿದ್ದು, ಈ ಕಟ್ಟಡಗಳ ಕಾಮಗಾರಿ ನಿರ್ವಹಿಸಿದ ಏಜೆನ್ಸಿಗಳನ್ನು ಪರಿಶೀಲಿಸಿ ಬ್ಲಾಕ್ ಲಿಸ್ಟ್ಗೆ ಸೇರಿಸುವ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದರು.

ಸಂಸದರು, ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಎಸ್.ಸಿ ಜನಸಂಖ್ಯೆ ಶೇ.40 ಕ್ಕಿಂತ ಹೆಚ್ಚಿರುವ ಗ್ರಾಮಗಳಿಗೆ ಸಮಗ್ರ ಅಭಿವೃದ್ದಿ ಕೈಗೊಳ್ಳಲು ಪ್ರಸಕ್ತ ವರ್ಷ 16 ಗ್ರಾಮಗಳು ಆಯ್ಕೆಯಾಗಿದ್ದು ಸರ್ಕಾರ ಇಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.

ಶಿವಮೊಗ್ಗ-ತುಮಕೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಕೆಲಸಗಳನ್ನು ಚುರುಕುಗೊಳಿಸಿ, ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಮುಗಿಸಬೇಕು. ಈ ಯೋಜನೆ ಮಂಜೂರಾಗಿ 4-5 ವರ್ಷಗಳಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಕುರಿತು ಸ್ಪಷ್ಟತೆ ನೀಡಬೇಕು. ಹಾಲಿನ ಡೈರಿ ಬಳಿಯ ಅಂಡರ್ ಪಾಸ್ ಕೆಲಸವನ್ನು ತ್ವರಿತ ಗತಿಯಲ್ಲಿ ಮಾಡಬೇಕು. ಇಲ್ಲಿ ಜನರು ಮಕ್ಕಳು ಓಡಾಡುವುದು ತುಂಬಾ ಕಷ್ಟವಾಗಿದೆ ಹಾಗೂ ಶಿವನಿ ಮತ್ತು ಬೆಲೇನಹಳ್ಳಿಯಲ್ಲಿಯೂ ಓಡಾಟ ಕಷ್ಟ ಆಗುತ್ತಿದೆ. ಆದ್ದರಿಂದ ಎನ್‌ಹೆಚ್ ಅಧಿಕಾರಿಗಳು ಕೆಲಸಗಳನ್ನು ಶೀಘ್ರದಲ್ಲಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.

ಶಿಕಾರಿಪುರ ತಾಲ್ಲೂಕಿನ ಕಲ್ಲಾಪುರ ಗೇಟ್ ನಿಂದ ಕುಟ್ರಳ್ಳಿವರೆಗೆ ಕೇವಲ 30 ಕಿ ಮೀ ಇದ್ದರೂ ಇಲ್ಲಿ ಟೋಲ್ ನಿರ್ಮಿಸಿದ್ದು ಈ ಟೋಲ್ ಗೇಟಿನಿಂದಾಗಿ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ನಿಯಮಾವಳಿ ಪ್ರಕಾರ 60 ಕಿ.ಮೀ.ಗೆ ಟೋಲ್ ನಿರ್ಮಿಸಬಹುದು ಎಂದಿದೆ. ಆದ್ದರಿಂದ ಈ ಟೋಲ್‌ನ್ನು ಬೇರೆಡೆ ಶಿಫ್ಟ್ ಮಾಡಬೇಕೆಂದು ಸದಸ್ಯರು, ಸಂಸದರು ಆಗ್ರಹಿಸಿದರು.

ಶಿವಮೊಗ್ಗ ನಗರದ ಗುಂಡಪ್ಪ ಶೆಡ್ ಅಂಡರ್ ಸೇತುವೆ ಅನುಮೋದನೆ ದೊರೆತು ಒಂದು ವರ್ಷವಾಗಿದ್ದು ಶೀಘ್ರ ಕಾರ್ಯಾರಂಭ ಮಾಡಬೇಕು ಹಾಗೂ ರೂ.73 ಕೋಟಿ ವೆಚ್ಚದಲ್ಲಿ ಮಂಜೂರಾಗಿರುವ ಫ್ರೀಡಂ ಪಾರ್ಕ್ ಹಿಂದಿನ ಆರ್‌ಓಬಿ ಕಾಮಗಾರಿಯನ್ನು ಸಹ ಶೀಘ್ರದಲ್ಲಿ ಆರಂಭಿಸಬೇಕೆಂದು ರೈಲ್ವೆ ಅಧಿಕಾರಿಗಳು ಮತ್ತು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಸಾಗರ ತಾಲ್ಲೂಕಿನ ಮೇಘಾನೆಯಲ್ಲಿ ಬಿಎಸ್ಎನ್ಎಲ್ ಟವರ್ ಆಗಬೇಕು. ಪ್ರಸ್ತುತ ಅಳವಡಿಸಲಾಗಿರುವ ಟವರ್‌ಗಳಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಸರಪಡಿಸಬೇಕು. ಹಳೆಯ ಟವರ್‌ಗಳನ್ನು ಪರಿಶೀಲಿಸಿ ದುರಸ್ತಿಪಡಿಸಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಬಾಕಿ ಕಡತಗಳನ್ನು ವಿಲೇ ಮಾಡಬೇಕೆಂದು ಬಿಎಸ್‌ಎನ್‌ಎಲ್ ಎಜಿಎಂ ರಿಗೆ ಸೂಚನೆ ನೀಡಿದರು.

ಪಿಎಂಜಿಎಸ್‌ವೈ ಯೋಜನೆಯಡಿ ರಾಜ್ಯಕ್ಕೆ ಒಟ್ಟು 53 ಕಾಮಗಾರಿಗಳು ಮಂಜೂರಾಗಿದ್ದು ಅದರಲ್ಲಿ ಶೇ.50 ರಷ್ಟು ಅಂದರೆ 25 ಕಾಮಗಾರಿಗಳು ಶಿವಮೊಗ್ಗ ಜಿಲ್ಲೆಗೆ ಮಂಜೂರಾಗಿದ್ದು, ಹೊಸನಗರ 14, ಸಾಗರ 06, ತೀರ್ಥಹಳ್ಳಿ 01 ಸೊರಬ 04 ಕಾಮಗಾರಿಗಳು ಮಂಜೂರಾಗಿದ್ದು ಗುಣಮಟ್ಟದೊಂದಿಗೆ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು.

ರಸ್ತೆ ಡಾಂಬರೀಕರಣ ಹಾಳಾಗಿರುವೆಡೆ ಜಿ.ಪಂ ಸಿಇಓ ಅವರು ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಬೇಕು ಎಂದ ಅವರು ಪಿಎಂಜಿಎಸ್‌ವೈ ಯೋಜನೆಯ ಕಾಮಗಾರಿಗಳನ್ನು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದು ಇತರೆ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯವೆಸಗಬೇಕೆಂದರು.

ದಿಶಾ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ್ ಮಾತನಾಡಿ, ರಸ್ತೆಗಳಲ್ಲಿ ಶಾರ್ಟ್ ಕರ್ವ್ಗಳಿಂದಾಗಿ ರಸ್ತೆ ಅಪಘಾತಗಳು ಹೆಚ್ಚುತ್ತಿವೆ ಆದ್ದರಿಂದ ಎನ್ ಹೆಚ್ ಸೇರಿದಂತೆ ಎಲ್ಲ ರಸ್ತೆ ಗಳಲ್ಲಿ ಬ್ಲಾಕ್ ಸ್ಪಾಟ್ಸ್ಗಳನ್ನು ಗುರುತಿಸಿ ಪಟ್ಟಿ ಮಾಡಿ, ಸೂಕ್ತ ಕ್ರಮ ವಹಿಸಬೇಕೆಂದು ಹಾಗೂ ಜನರಿಗೆ ನೀರು ಒದಗಿಸುವ ಮಹತ್ವಾಕಾಂಕ್ಷಿ ಜೆಜೆಎಂ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಜನರಿಗೆ ನ್ಯಾಯ ಒದಗಿಸಬೇಕು ಹಾಗೂ ಜಲಶಕ್ತಿ ಯೋಜನೆಯನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.

ಗ್ರಾಮೀಣ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಅಭಿಯಂತರರು ಮಾತನಾಡಿ, ಜೆಜೆಎಂ ಯೋಜನೆಯಡಿ ಜಿಲ್ಲೆಗೆ ಓವರ್‌ಹೆಡ್, ಬೋರ್‌ವೆಲ್, ನಳ ಸಂಪರ್ಕ ಸೇರಿ 2528 ಕಾಮಗಾರಿಗಳು ಮಂಜುರಾಗಿದ್ದು 2023 ಪೂರ್ಣಗೊಂಡಿವೆ, 494 ಚಾಲ್ತಿಯಲ್ಲಿದ್ದು ಶೇ.86 ಕೆಲಸ ಆಗಿದೆ. ರೂ 728 ಕೋಟಿ ಮಂಜೂರಾಗಿದ್ದು 628 ಕೋಟಿ ವೆಚ್ಚವಾಗಿದೆ ಎಂದರು.

ದಿಶಾ ಸಮಿತಿ ಸದಸ್ಯರಾದ ಗಿರೀಶ್ ಭದ್ರಾಪುರ ಮಾತನಾಡಿ 70 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಕೊಳಚೆ ನೀರು ನದಿಗೆ ಸೇರ್ಪಡೆಯಾಗುತ್ತಿರುವ ಕಾರಣ ಆ ನೀರು ತಮಗೆ ಬೇಡವೆಂದು ಪಿಳ್ಳಂಗಿರಿ, ಬುಳ್ಳಾಪುರ ಇತರೆ ಗ್ರಾಮಸ್ಥರು ಈ ನೀರನ್ನು ಬಳಕೆ ಮಾಡಲು ಒಪ್ಪುತ್ತಿಲ್ಲ. ಗುಂಡಪ್ಪ ಶೆಡ್, ರಾಮಣ್ಣಶೆಟ್ಡಿ ಪಾರ್ಕ್ ಮತ್ತು ಚಟ್ನಹಳ್ಳಿಯಲ್ಲಿ ಕೊಳಚೆ ನೀರು ನದಿಗೆ ಸೇರ್ಪಡೆಯಾಗುತ್ತಿದ್ದು ಇದನ್ನು ಕೂಡಲೇ ಪರಿಶೀಲಿಸಿ ಕ್ರಮ ವಹಿಸಬೇಕೆಂದರು.

ಸಂಸದರು, ಶಿವಮೊಗ್ಗ ಸೇರಿದಂತೆ ಭದ್ರಾವತಿ ಮತ್ತು ಇತರ ನಗರ ಪ್ರದೇಶದಲ್ಲಿ ಕೊಳಚೆ ನೀರು ನದಿಗೆ ಸೇರುತ್ತಿರುವ ಬಗ್ಗೆ ಪರಿಶೀಲಿಸಿ ಆದ್ಯತೆ ಮೇಲೆ ಇದನ್ನು ತಡೆ ಹಿಡಿಯಬೇಕು ಎಂದು ಸೂಚಿಸಿದರು.

ಕೋಟೆಗಂಗೂರು ಮತ್ತು ಶಿಕಾರಿಪುರ ಬ್ರಾಡ್‌ಗೇಜ್ ಯೋಜನೆಗೆ ಸಂಬಂಧಿಸಿದಂತೆ ಇಲ್ಲಿಗೆ ಕರ್ನಾಟಕ ನಗರ ನೀರು ಮಂಡಳಿ ವತಿಯಿಂದ ನೀರು ಸರಬರಾಜು ಮಾಡಲು ಕ್ರಮ ವಹಿಸುವಂತೆ ತಿಳಿಸಿದರು.

ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರವಾಹನ ವಿತರಣೆ :

2024–25ನೇ ಸಾಲಿನ ಸಂಸತ್ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ,ಅರ್ಹ ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿಚಕ್ರವಾಹನ ವಿತರಣೆ ಮಾಡಿ, ವಿಕಲಚೇತನರು ಸ್ವಾವಲಂಬಿಗಳಾಗಿ, ಆತ್ಮಗೌರವದೊಂದಿಗೆ ಬದುಕು ಕಟ್ಟಿಕೊಳ್ಳಲು ಚಲನೆಯ ಸ್ವಾತಂತ್ರ‍್ಯ ಅತ್ಯಂತ ಅವಶ್ಯಕ. ಈ ದ್ವಿಚಕ್ರವಾಹನಗಳು ಅವರ ಶಿಕ್ಷಣ, ಉದ್ಯೋಗ ಹಾಗೂ ದಿನನಿತ್ಯದ ಜೀವನವನ್ನು ಸುಲಭಗೊಳಿಸಿ, ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು.

ಜಿಲ್ಲೆಯಲ್ಲಿ ಚಡ್ಡಿ ಗ್ಯಾಂಗ್ ಕಳ್ಳತನ ಹೆಚ್ಚಾಗಿದ್ದು, ಶೇ.10 ರಿಂದ 12 ಮಾತ್ರ ರಿಕವರಿ ಆಗುತ್ತಿದೆ. ಹಾಗೂ ಜಿಲ್ಲೆಯಲ್ಲಿ ಗಾಂಜಾ, ಓಸಿ, ಮಟ್ಕಾ, ಗ್ರಾಮಗಳಲ್ಲಿ ಸೆಕೆಂಡ್ಸ್ ಮದ್ಯ ಮಾರಾಟ ಹೆಚ್ಚಿದ್ದು, ಇದನ್ನು ನಿಯಂತ್ರಿಸಲು ಮತ್ತು ತಡೆಯಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
– ಬಿ.ವೈ.ರಾಘವೇಂದ್ರ, ಸಂಸದ

    ಸಭೆಯಲ್ಲಿ ದಿಶಾ ಸಮಿತಿ ಸದಸ್ಯರಾದ ದೇವೇಂದ್ರಪ್ಪ, ಮಹಾದೇವಪ್ಪ, ಸುವರ್ಣ, ಗುರುಮೂರ್ತಿ, ಗಿರೀಶ್ ಭದ್ರಾಪುರ, ಆನಂದ್, ನಗರಸಭೆ, ಪಟ್ಟಣ ಪಂಚಾಯತ್ ಮತ್ತು ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ. ಸಿಇಒ ಹೇಮಂತ್ ಎನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

    Leave a Comment