ಶಿವಮೊಗ್ಗ ; ಇಲ್ಲಿನ ಡಯಟ್ ನಲ್ಲಿ ನಡೆದ ಸರಳ ಮತ್ತು ಸುಂದರ ಕಾರ್ಯಕ್ರಮದಲ್ಲಿ ನಲಿ-ಕಲಿ ಕ್ರಿಯಾಶೀಲ ತಾರೆಯರ ತಂಡ ಹಾಗೂ ಆರ್.ಕೆ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಹೊಸನಗರ ತಾಲೂಕಿನ ವಿವಿಧ ಶಾಲೆಗಳಿಗೆ ನಲಿ-ಕಲಿ ಟೇಬಲ್ ಮ್ಯಾಟ್ ಮತ್ತು ನೋಟ್ ಬುಕ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಯಟ್ ನ ಹಿರಿಯ ಉಪನ್ಯಾಸಕ ಡಾ. ಹರಿಪ್ರಸಾದ್ ಅವರು, ನೀಡುವುದರಿಂದ ಆಗುವ ಆನಂದ ಬೇರೆ ಯಾವುದರಿಂದ ಆಗುವುದಿಲ್ಲ ಮತ್ತು ನಮ್ಮ ಆಯಸ್ಸು ವೃದ್ಧಿಸುತ್ತದೆ ಎಂದು ತಿಳಿಸಿದರು.
ಆರ್.ಕೆ ಫೌಂಡೇಶನ್‌ನ ಕಾರ್ಯದರ್ಶಿ ನಾರಾಯಣ ಮಾತನಾಡಿ, ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗುವ ಉದ್ದೇಶದಿಂದ ನಮ್ಮ ಟ್ರಸ್ಟ್ ಅಡಿಯಲ್ಲಿ ಕೇವಲ ಸರ್ಕಾರಿ ಶಾಲೆಗಳಿಗೆ ಕಲಿಕೋಪಕರಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಡಯಟ್ ನ ಇನ್ನೋರ್ವ ಹಿರಿಯ ಉಪನ್ಯಾಸಕಿ ರೇಣುಕಾ ಮಾತನಾಡಿ, ದಾನಗಳಲ್ಲಿ ಮಹಾದಾನ ವಿದ್ಯಾದಾನ. ವಿದ್ಯಾ ಸಾಕ್ಷಾತ್ಕಾರಗೊಳ್ಳಲು ಶಿಕ್ಷಕರು ಮತ್ತು ಸಮುದಾಯದ ಸಹಕಾರ ಅತ್ಯಂತ ಮಹತ್ವದ್ದಾಗಿರುತ್ತದೆ ಈಗಿನ ದಿನಮಾನಗಳಲ್ಲಿ ಸಮುದಾಯ ಶಿಕ್ಷಣದೊಂದಿಗೆ ಬೆರತು ಶಿಕ್ಷಣವನ್ನು ಬಲಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ನಲಿ-ಕಲಿ ಕ್ರಿಯಾಶೀಲ ತಾರೆಯರ ತಂಡದ ಅಧ್ಯಕ್ಷೆ ಫೌಜಿಯ ಸರಾವತ್, ಗೌರವಾಧ್ಯಕ್ಷೆ ಲಲಿತಾ ವೈ.ಎನ್, ಕಾರ್ಯದರ್ಶಿ ಭಾಗೀರಥಿ, ನಲಿ-ಕಲಿ ಕ್ರಿಯಾಶೀಲ ತಾರೆಯರ ತಂಡದ ಸದಸ್ಯರು ಹೊಸನಗರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಗಂಗಾನಾಯ್ಕ್, ಜಿಲ್ಲಾ ಪದವೀಧರ ಸಂಘದ ಅಧ್ಯಕ್ಷ ಸತ್ಯನಾರಾಯಣ, ವಿವಿಧ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು, ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಭಾಗವಹಿಸಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.