ಹೊಸನಗರ ; ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ 41 ಪ್ರೌಢಶಾಲೆಗಳಲ್ಲಿ ಒಟ್ಟು 1615 ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿದ್ದು ಅದರಲ್ಲಿ 1447 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 89.60 ಫಲಿತಾಂಶ ಗಳಿಸಿದ್ದಾರೆ. ಆದರೂ ಈ ಫಲಿತಾಂಶ ನನಗೆ ತೃಪ್ತಿ ತಂದಿಲ್ಲವೆಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್ ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1Bk2QBDfj2/
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಪರೀಕ್ಷೆ ಎದುರಿಸಿದ್ದ 826 ಬಾಲಕರಲ್ಲಿ 710 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 86 ಫಲಿತಾಂಶ ಗಳಿಸಿದ್ದು 789 ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸಿದ್ದು ಅವರಲ್ಲಿ 737 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಶೇ. 93 ಫಲಿತಾಂಶ ನೀಡಿದ್ದು 12 ಶಾಲೆಗಳು 95 ಪ್ಲಸ್ ಹಾಗೂ 06 ಶಾಲೆಗಳು 90 ಪ್ಲಸ್ ಫಲಿತಾಂಶ ನೀಡುವ ಮೂಲಕ ಸಾಧನೆಯ ಮೆಟ್ಟಿಲು ಏರುತ್ತಿದ್ದು ಮೂವರು ವಿದ್ಯಾರ್ಥಿಗಳಾದ ಯಶಸ್ವಿನಿ, ಮೈತ್ರಿ ಹಾಗೂ ಡಿ. ಪ್ರಣಮ್ 625ಕ್ಕೆ 622 ಅಂಕ ಗಳಿಸಿದ್ದು, ಅಭಿಷೇಕ್ ಎಸ್ ಕಶ್ಯಪ್ ಹಾಗೂ ಬಿ.ಕೆ ನಿಧಿ 621 ಅಂಕ ಹಾಗೂ ತೇಜಸ್ವಿನಿ 620 ಅಂಕ ಗಳಿಸಿದ್ದಾರೆ.

ತಾಲೂಕಿನ ನಿಟ್ಟೂರು ಹಾಗೂ ಸಂಪೆಕಟ್ಟೆಯ ಸರ್ಕಾರಿ ಪ್ರೌಢಶಾಲೆ, ಗೇರುಪುರದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ, ಕೋಡೂರಿನ ಯಳಗಲ್ಲು ಡಾ. ಅಂಬೇಡ್ಕರ್ ವಸತಿ ಶಾಲೆ ಇವೆರಡು ಅನುದಾನಿತ ಶಾಲೆ, ಹೊಸನಗರ ಪಟ್ಟಣದ ಗುರೂಜಿ ಇಂಟರ್ ನ್ಯಾಷನಲ್ ಶಾಲೆ ಹಾಗೂ ಹೋಲಿ ರಿಡೀಮರ್ ಪ್ರೌಢಶಾಲೆ, ನಗರದ ಅಮೃತಮಯ ಪ್ರೌಢಶಾಲೆ ಹಾಗೂ ನಿಟ್ಟೂರಿನ ಪ್ರಜ್ಞಾ ಭಾರತಿ ಪ್ರೌಢಶಾಲೆಗಳು ಶೇ. 100 ಫಲಿತಾಂಶ ಗಳಿಸಿ ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಗರಿ ಮೂಡಿಸಿದ್ದಾರೆಂದರು.

ಇನ್ನೂ ಸಾಗರ, ಹೊಸನಗರ ಕ್ಷೇತ್ರದ ಶಾಸಕರು ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ಹಾಗೂ ಶಾಸಕರು ಹಾಗೂ ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ತಾಲೂಕಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಅಭಿನಂದಿಸಿದ್ದಾರೆ