ಬೆಂಗಳೂರು ; ನವಜಾತ ಶಿಶುವನ್ನು ಬೇರೆಯವರಿಗೆ ಮಾರಾಟ ಮಾಡಿದ ಆರೋಪ ಎದುರಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ. ಜಿ.ಎಸ್.ಬಾಲಕೃಷ್ಣ ಅವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸುವ ನಿರ್ಣಯವನ್ನು ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಏನಿದು ಪ್ರಕರಣ ?
ಡಾ. ಜಿ.ಎಸ್.ಬಾಲಕೃಷ್ಣ, ಪ್ರಸೂತಿ ತಜ್ಞರು, ಸಾರ್ವಜನಿಕ ಆಸ್ಪತ್ರೆ ಕೊಪ್ಪ, ಚಿಕ್ಕಮಗಳೂರು ಜಿಲ್ಲೆ ಇವರು ಕು. ಕಲ್ಪನಾ ಎಂಬ ಗರ್ಭಿಣಿಗೆ 2020ರ ಮಾ.14 ರಂದು ಹೆರಿಗೆ ಮಾಡಿಸಿ, ಅವರಿಗೆ ಜನಿಸಿದ ಹೆಣ್ಣು ಮಗುವನ್ನು 50 ಸಾವಿರ ರೂ.ಗಳಿಗೆ ಪ್ರೇಮಲತಾ ಎಂಬುವವರಿಗೆ ಮಾರಾಟ ಮಾಡಿ, ಪ್ರೇಮಲತಾ ಎಂಬುವವರಿಗೆ ಹೆರಿಗೆಯಾದಂತೆ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿರುವ ಆರೋಪಕ್ಕಾಗಿ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆಯಲ್ಲಿ ದುರ್ನಡತೆಯ ಆರೋಪವು ಸಾಬೀತಾಗಿರುವುದರಿಂದ, ಇವರನ್ನು ಕೆಸಿಎಸ್ (ಸಿಸಿಎ) ನಿಯಮಗಳು 1957ರ ನಿಯಮ 8(vi) ರಡಿಯಲ್ಲಿ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ದಂಡನೆಯನ್ನು ವಿಧಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ವಿವರಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.