ಶಿವಮೊಗ್ಗ ; ಜಿಲ್ಲೆಯ ಸಾಗರ ಅರಣ್ಯ ವಿಭಾಗದ, ಬೈರಾಪುರ ಗ್ರಾಮದ ಅಂಬಲಿಗೋಳ ಜಲಾಶಯದ ಹಿನ್ನೀರಿನಲ್ಲಿ ನಿನ್ನೆ ಸಂಜೆ 7-8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ವರದಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯ ಜೀವಿ ಪರಿಪಾಲಕರಿಗೆ ಸೂಚನೆ ನೀಡಿರುವ ಸಚಿವರು, ಹುಲಿಗೆ ಗುಂಡು (ಪೆಲೆಟ್ಸ್) ಹೊಡೆದ ಗಾಯವೂ ಇರುವುದಾಗಿ ಮಾಧ್ಯಮಗಳಲ್ಲಿ ಸಚಿತ್ರ ವರದಿಗಳು ಪ್ರಕಟವಾಗಿದ್ದು ಈ ಬಗ್ಗೆ ತನಿಖೆ ನಡೆಸಿ 10 ದಿನಗಳ ಒಳಗಾಗಿ ವಾಸ್ತವ ವರದಿ ಸಲ್ಲಿಸಲು ತಿಳಿಸಿದ್ದಾರೆ.

ಹುಲಿಯ ಮೃತ ದೇಹ ಪತ್ತೆಯಾಗಿರುವ ಪ್ರದೇಶದಲ್ಲಿ ಯಾವತ್ತೂ ಹುಲಿಯ ದರ್ಶನವೇ ಆಗಿಲ್ಲ. ಹೀಗಾಗಿ ಬೇರೆ ಕಡೆ ಹುಲಿ ಕೊಂದು ಇಲ್ಲಿ ಹಾಕಿರಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿರುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಲು ಸೂಚಿಸಿದ್ದಾರೆ.
