ಉತ್ತಮ ಸತ್ಯ ಧರ್ಮ ಪರಿಪಾಲನೆಯೇ ಆತ್ಮಕಲ್ಯಾಣ ; ಹೊಂಬುಜ ಶ್ರೀಗಳು

Written by malnadtimes.com

Published on:

RIPPONPETE ; ಅಸತ್ಯಗಳನ್ನು ಹೇಳುವ ಮೂಲಕ ವಾಸ್ತವ, ವಸ್ತು ಸ್ವರೂಪವನ್ನು ವಿರೂಪಗೊಳಿಸಿದಂತಾಗುತ್ತದೆ. ದಶಲಕ್ಷಣ ಧರ್ಮದ ಉತ್ತಮ ಸತ್ಯ ಧರ್ಮ ಪರಿಪಾಲನೆಯೇ ಆತ್ಮಕಲ್ಯಾಣವನ್ನುಂಟು ಮಾಡುವುದು ನಿಶ್ಚಿತ’ ಎಂದು ಹೊಂಬುಜ ಜೈನ ಮಠದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಆಚಾರ್ಯ ಉಮಾಸ್ವಾಮಿಯವರ ತತ್ತ್ವಾರ್ಥ ಸೂತ್ರ, ಸಮಂತಭದ್ರ ಆಚಾರ್ಯರ ಗ್ರಂಥಗಳ ಉಲ್ಲೇಖ ಮಾಡುತ್ತಾ ಸ್ವಸ್ತಿಶ್ರೀಗಳವರು ಯಥಾವತ್ತಾಗಿ ಸತ್ಯವನ್ನು ಹೇಳುವುದರಿಂದ ಲೋಭ, ಮಾನ, ಕಷಾಯಗಳ ನಿವೃತ್ತಿಯಾಗಿ ಜೀವನದಲ್ಲಿ ಸತ್ಯಯುತ ಸಾಧನೆ ಮಾಡಿದಂತಾಗುವುದು ಎಂದರು.

ಜೈನರ ದಕ್ಷಿಣ ಕಾಶಿ ಎಂದೇ ಖ್ಯಾತಿಹೊಂದಿರುವ ಹೊಂಬುಜ ಜೈನ ಮಠದಲ್ಲಿ ಆಯೋಜಿಸಲಾಗಿದ್ದ ದಶಲಕ್ಷಣ ಪರ್ವದ ಐದನೇಯ ದಿನದ ಧಾರ್ಮಿಕ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಸತ್ಯ ಧರ್ಮವು ಎಲ್ಲ ಸಂಕಷ್ಟಗಳಿಗೂ ಪರಿಹಾರ ನೀಡುತ್ತದೆ ಮಾತ್ರವಲ್ಲದೇ ಶಾಂತಿ-ನೆಮ್ಮದಿಯ ಮನಸ್ಥಿತಿ ಪ್ರಾಪ್ತಿಯಾಗುತ್ತದೆ ಎಂದು ದಶಲಕ್ಷಣ ಪರ್ವದ ಐದನೇಯ ದಿನದ ಉತ್ತಮ ಸತ್ಯಧರ್ಮ ಎಂಬ ವಿಷಯದಲ್ಲಿ ವ್ಯಾಖ್ಯಾನಿಸಿ, ಭಕ್ತರನ್ನು ಆಶೀರ್ವದಿಸಿದರು.

ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಲೋಕವಂದ್ಯ ಯಕ್ಷಿ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಜಟ್ಟಿಂಗರಾಯ ಕ್ಷೇತ್ರಪಾಲ ಸನ್ನಿಧಿಯಲ್ಲಿ ಧಾರ್ಮಿಕ ವಿಧಾನಗಳು ಪೂರ್ವಪರಂಪರೆಯಂತೆ ಆರ್ಯಿಕಾ ಶ್ರೀ 105 ಶಿವಮತಿ ಮಾತಾಜಿ ಉಪಸ್ಥಿತಿಯಲ್ಲಿ ನೆರವೇರಿದವು.

ಶ್ರೀ ಪದ್ಮಾವತಿ ಮಹಿಳಾ ಮಂಡಳ, ಹುಂಚ ಶ್ರಾವಕ ಶ್ರಾವಿಕೆಯರು, ಪರವೂರ ಭಕ್ತವೃಂದ, ಶ್ರೀಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಂಯಮ ವ್ರತಾಚರಣೆಯಿಂದ ಜ್ಞಾನೋದಯ :

RIPPONPETE ; ಪರ್ಯಷಣ ಪರ್ವ ಆರನೇಯ ದಿನದಂದು ಸಂಯಮ ವ್ರತಾಚರಣೆಯ ಫಲಾಫಲದ ನಿಷ್ಕರ್ಷೆ ಮಾಡಿದ ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಪೀಠಾಧೀಶರಾದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು “ಜೀವನದಲ್ಲಿ ಸಂಯಮದ ಧರ್ಮದಿಂದ ಜ್ಞಾನೋದಯ ಪ್ರಾಪ್ತಿಯಾಗಿ, ಸರ್ವರಲ್ಲೂ ಸಮತಾಭಾವ, ರಾಗಾದಿದ್ವೇಷ ಮರೆತು ಸ್ನೇಹ ಬಾಂಧವ್ಯ ವರ್ಧಿಸುತ್ತದೆ” ಎಂದರು.

ಜೈನಾಚಾರ್ಯರ ಉಪದೇಶಗಳು ಮಾನವ ಕಲ್ಯಾಣಕ್ಕೊಸ್ಕರವಾಗಿರುವುದನ್ನು ಪರ್ಯೂಷಣ ಪರ್ವದ ದಶಧರ್ಮಗಳ ಕುರಿತು ಮನನ ಮಾಡುವುದರಿಂದ ವೈಮನಸ್ಸು, ಶತ್ರುತ್ವ ಬೆಳೆಸಿಕೊಳ್ಳದೇ ಇಂದ್ರಿಯಗಳ ನಿಗ್ರಹ ಮತ್ತು ತಾಳ್ಮೆ ಸತ್‌ಪರಿಣಾಮ ನೀಡುತ್ತದೆ ಎಂದು ಹರಸಿ ಪ್ರವನಚ ಮಾಡಿದರು. ಸಂಯಮ ಧರ್ಮಪಾಲನೆಯು ತಪಸ್ಸಿಗೆ ಸಮಾನ ಎಂದರು.

ಪೂಜ್ಯ ಆರ್ಯಿಕಾ ಶ್ರೀ 105 ಶಿವಮತಿ ಮಾತಾಜಿ ಧಾರ್ಮಿಕ ವಿಧಿಗಳ ಸಾನಿಧ್ಯ ನೀಡಿದ್ದರು. ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಮಹಾವೀರ ಸ್ವಾಮಿ ಶ್ರೀ ಕ್ಷೇತ್ರಪಾಲ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ವಿಧಿವತ್ತಾಗಿ ನೆರವೇರಿತು.

Leave a Comment