Ripponpete

ಕೆರೆ ಹೂಳೆತ್ತುವಾಗ ಪುರಾತನ ಜೈನ ತೀರ್ಥಂಕರರ ವಿಗ್ರಹ ಪತ್ತೆ

ರಿಪ್ಪನ್‌ಪೇಟೆ ; ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಸಮೀಪದ ಗವಟೂರು ಗ್ರಾಮದ ತಾವರೆಕೆರೆ ಪ್ರದೇಶದಲ್ಲಿ ನಡೆಯುತ್ತಿರುವ ಹೂಳೆತ್ತುವ ವೇಳೆ ಪುರಾತನ ಜೈನ ಮತಕ್ಕೆ ಸಂಬಂಧಿಸಿದ ಅಪರೂಪದ ಐತಿಹಾಸಿಕ ವಿಗ್ರಹ ಪತ್ತೆಯಾಗಿರುವುದು ಈ ಭಾಗದಲ್ಲಿ ಕುತೂಹಲ ಮೂಡಿಸಿದೆ.

WhatsApp Group Join Now
Telegram Group Join Now
Instagram Group Join Now

ಹಲವು ಶತಮಾನಗಳ ಹಿಂದಿನ ಜೈನ ತೀರ್ಥಂಕರರ ಮೂರ್ತಿಗಳು ಹಾಗೂ ಪೀಠದ ಅವಶೇಷಗಳು ದೊರೆತಿರುವುದು ಈ ಪ್ರದೇಶದ ಐತಿಹಾಸಿಕ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸುವಂತಾಗಿದೆ.

ತಾವರೆಕೆರೆ ಬಳಿ ಅಭಿವೃದ್ದಿ ಕಾಮಗಾರಿ ನಡೆಯುತ್ತಿದ್ದ ವೇಳೆ ಶುಕ್ರವಾರ ಸಂಜೆ ಹಿಟಾಚಿ ಯಂತ್ರದ ಮೂಲಕ ಮಣ್ಣು ತೆರವು ಕಾರ್ಯ ನಡೆಯುತ್ತಿತ್ತು. ಇದೇ ವೇಳೆ ಭೂಮಿಯೊಳಗೆ ದೊಡ್ಡ ಗಾತ್ರದ ಕಲ್ಲಿನ ರಚನೆಗಳು ಮತ್ತು ಕೆತ್ತನೆಯಿರುವ ಶಿಲಾಮೂರ್ತಿಗಳು ಕಾಣಿಸಿಕೊಂಡಿವೆ. ಆರಂಭದಲ್ಲಿ ಸಾಮಾನ್ಯ ಕಲ್ಲಿಗಳೆಂದು ಭಾವಿಸಿದ ಕಾರ್ಮಿಕರು ನಂತರ ಅವುಗಳಲ್ಲಿ ವಿಶೇಷ ಕೆತ್ತನೆಗಳು ಇರುವುದನ್ನು ಗಮನಿಸಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

ವಿಷಯ ತಿಳಿದ ತಕ್ಷಣ ಸ್ಥಳೀಯ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಆಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪತ್ತೆಯಾದ ಮೂರ್ತಿಗಳು ಮತ್ತು ಅವಶೇಷಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವ ಕಾರ್ಯ ಕೈಗೊಳ್ಳಲಾಯಿತು.

ಪ್ರಾಥಮಿಕ ಮಾಹಿತಿಯ ಪ್ರಕಾರ ಪತ್ತೆಯಾದ ಮೂರ್ತಿಗಳು ಸುಮಾರು 11-12ನೇ ಶತಮಾನಕ್ಕೆ ಸೇರಿದ ಜೈನ ಧರ್ಮದ ತೀರ್ಥಂಕರ ಮೂರ್ತಿಗಳಾಗಿರಬಹುದೆಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಮೂರ್ತಿಗಳಲ್ಲಿ ತೀರ್ಥಂಕರರ ಲಾಂಛನ ಸ್ಪಷ್ಟವಾಗಿ ಕಾಣಿಸದಿರುವುದರಿಂದ ಅವು ಯಾವ ತೀರ್ಥಂಕರರಿಗೆ ಸಂಬಂದಿಸಿದ್ದೆಂಬುದನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗಿಲ್ಲ ಎಂದು ಇತಿಹಾಸ ಸಂಶೋಧಕರು ತಿಳಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಪತ್ತೆಯಾದ ಮೂರ್ತಿಯ ಶೈಲಿ ಗಮನಿಸಿದರೆ ತೀರ್ಥಂಕರರು ಪದ್ಮಾಸನದಲ್ಲಿ ಧ್ಯಾನಸ್ಥ ಭಂಗಿಯಲ್ಲಿ ಕುಳಿತಿರುವುದು ಕಾಣಿಸುತ್ತದೆ. ಮೂರ್ತಿಯ ಪೀಠದಲ್ಲಿ ಪುಷ್ಪದ ಆಕೃತಿಗಳನ್ನು ಸುಂದರವಾಗಿ ಕೆತ್ತನೆ ಮಾಡಲಾಗಿದ್ದು ತಲೆಯ ಹಿಂದೆ ಪ್ರಭಾವಳಿ ಚಿತ್ರಿಸಿರುವುದು ವಿಶೇಷತೆಯಾಗಿದೆ. ಒರಗು ಪೀಠದ ಸುತ್ತಲೂ ಚೌಕಟ್ಟು ನಿರ್ಮಿಸಿ ಅದನ್ನು ಹೂವಿನ ಚಿತ್ತಾರಗಳಿಂದ ಅಲಂಕರಿಸಿರುವುದು ಆ ಕಾಲದ ಶಿಲ್ಪಕಲೆಯ ವೈಭವವನ್ನು ಬಿಂಬಿಸುತ್ತದೆ. ಆದರೆ ಕಾಲಕ್ರಮೇಣ ಮೂರ್ತಿಯ ಕೆಲವು ಭಾಗಗಳು ಭಗ್ನಗೊಂಡಿದ್ದು ಕೆಲವಡೆ ಕೆತ್ತನೆಗಳು ಹಾನಿಗೊಳಗಾಗಿರುವುದು ಕಂಡುಬಂದಿದೆ. ಆದರೂ ಮೂರ್ತಿಯ ಮೂಲ ಆಕಾರ ಹಾಗೂ ಶಿಲ್ಪ ವೈಶಿಷ್ಟಗಳು ಸ್ಪಷ್ಟವಾಗಿ ಉಳಿದಿರುವುದರಿಂದ ಇದು ಮಹತ್ವದ ಪುರಾತತ್ವ ಪತ್ತೆಯಾಗಿ ಪರಿಗಣಿಸಲಾಗುತ್ತಿದೆ.

ಇದೇ ಪ್ರದೇಶದಲ್ಲಿ ಪೀಠ ಸ್ಥಾಪನೆಗೆ ಬಳಸಿದ್ದ ಅಡಿಗಲ್ಲು ಹಾಗೂ ಇತರ ಶಿಲಾ ಅವಶೇಷಗಳು ದೊರೆತಿರುವುದರಿಂದ ಈ ಸ್ಥಳದಲ್ಲಿ ಹಿಂದೆ ಜೈನ ಬಸದಿ ಅಥವಾ ಧಾರ್ಮಿಕ ಕೇಂದ್ರ ಅಸ್ತಿತ್ವದಲ್ಲಿದ್ದಿರಬಹುದೆಂಬ ಅಭಿಪ್ರಾಯ ಬಲಗೊಂಡಿದೆ. ಪುರಾತತ್ವ ಇಲಾಖೆಯ ಅಧಿಕಾರಿಗಳ ಪ್ರಕಾರ ಇನ್ನಷ್ಟು ವೈಜ್ಞಾನಿಕ ಶೋಧ ಮತ್ತು ತಜ್ಞರಿಂದ ಅಧ್ಯಯನ ನಡೆಸಿದರೆ ಹೆಚ್ಚಿನ ಐತಿಹಾಸಿಕ ಕುರುಹುಗಳು ಹಾಗೂ ಕಟ್ಟಡ ಅವಶೇಷಗಳು ಪತ್ತೆಯಾಗುವ ಸಾಧ್ಯತೆ ಇದೆ.

ಮಲೆನಾಡು ಭಾಗದಲ್ಲಿ ಜೈನ ಧರ್ಮದ ಇತಿಹಾಸ ಸಾಕಷ್ಟು ಪುರಾತನವಾಗಿದ್ದು ಅನೇಕ ಕಡೆಗಳಲ್ಲಿ ಜೈನ ಬಸದಿಗಳು ಹಾಗೂ ಶಿಲ್ಪಕಲೆಗಳ ಅವಶೇಷಗಳು ದೊರೆತಿವೆ. ತಾವರೆಕೆರೆ ಪ್ರದೇಶದಲ್ಲಿ ಪತ್ತೆಯಾದ ಈ ಮೂರ್ತಿಗಳು ಕೂಡಾ ಆ ಐತಿಹಾಸಿಕ ಪರಂಪರೆಯ ಮತ್ತೊಂದು ಮಹತ್ವದ ಕೊಂಡಿಯಾಗಬಹುದು ಎಂದು ಹೇಳಲಾಗುತ್ತಿದೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]