ಹೊಸನಗರ ; ಸರ್ಕಾರಿ ಜಾಗ ಒತ್ತುವರಿ ಮಾಡುವ ಹುನ್ನಾರ ಮಾಡುತ್ತಿರುವ ಪ್ರಭಾವಿ ವ್ಯಕ್ತಿಯಿಂದ ಹುಂಚ ಗ್ರಾ.ಪಂ ವ್ಯಾಪ್ತಿಯ ಆನೆಗದ್ದೆ ಸಮೀಪದ ಯಲ್ಲದಕೋಣೆ ಗ್ರಾಮದ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಕಂಡುಬಂದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/19Nw9kJYpr/
ಈ ಪ್ರಭಾವಿ ವ್ಯಕ್ತಿ ಅಕ್ರಮ ಜಾಗದ ವ್ಯಾಮೋಹಕ್ಕೆ ಸುಮಾರು 26 ಮನೆಗಳ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದ್ದು ಸುಮಾರು 60ರ ಇಳಿ ವಯಸ್ಸಿನ ಮಹಿಳೆ ಸರ್ವಮಂಗಳ ಎಂಬುವರ ಮನೆ ಸುಮಾರು 60 ಅಡಿ ಕಂದಕಕ್ಕೆ ಬೀಳುವ ಆತಂಕ ಕಂಡುಬಂದಿದೆ.

ಖಾಸಗಿ ವ್ಯಕ್ತಿಯೋರ್ವ ಆನೆಗದ್ದೆಯ ಯಲ್ಲದಕೋಣೆ ಸ.ನಂ. 17ರಲ್ಲಿ ಅಕ್ರಮ ಭೂ ಒತ್ತುವರಿಯಿಂದ ರಸ್ತೆ ಸಂಪರ್ಕ ಕಡಿಗೊಳ್ಳುವ ಸಾಧ್ಯತೆ ಇದ್ದು ಈಗಾಗಲೇ ಯಲ್ಲದಕೋಣೆ ಸಂಪರ್ಕಿಸುವ ರಸ್ತೆಗೆ ಸುಮಾರು 1.50 ಕೋಟಿ ರೂ. ವ್ಯಯ ಮಾಡಲಾಗಿದೆ.
ಸುಸರ್ಜಿತವಾದ ಸಿಮೆಂಟ್ ರಸ್ತೆ ನಿರ್ಮಿಸಲಾಗಿದ್ದು ಪ್ರಭಾವಿ ವ್ಯಕ್ತಿಯೋರ್ವ ಗ್ರಾಮದಲ್ಲಿ ಯಾರು ಇಲ್ಲದ ಸಮಯದಲ್ಲಿ ಮಣ್ಣು ಕೊರೆದು ಅಕ್ರಮ ಭೂ ಒತ್ತುವರಿ ಮಾಡುತ್ತಿರುವ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.

ರಸ್ತೆಯ ಪಕ್ಕದಲ್ಲೇ ಸುಮಾರು 50 ರಿಂದ 60 ಅಡಿ ಆಳದಲ್ಲಿ ಖಾಸಗಿ ವ್ಯಕ್ತಿ ಅಡಿಕೆ ತೋಟವಿದ್ದು ಅಕ್ರಮ ಭೂ ಒತ್ತುವರಿಯಿಂದ ಸಿಮೆಂಟ್ ರಸ್ತೆ ಮತ್ತು ಕಾಲುಸಂಕ ಕುಸಿದು ಹೋಗುವ ಹಂತ ತಲುಪಿದೆ. ಇದನ್ನು ಪ್ರಶ್ನೆ ಮಾಡಲು ಹೋದ ಗ್ರಾಮಸ್ಥರ ಮೇಲೆಯೇ ಖಾಸಗಿ ವ್ಯಕ್ತಿ ಸುಮಾರು 10 ಕೇಸ್ ಹಾಕಿಸಿದ್ದಾನೆ. ವ್ಯಕ್ತಿ ಮಗ ವಕೀಲ ವೃತ್ತಿ ಮಾಡುತ್ತಿದ್ದು ಇದನ್ನೇ ಬಂಡವಾಳ ಮಾಡಿಕೊಂಡ್ಡು ಗ್ರಾಮಸ್ಥರ ಮೇಲೆ ದೂರು ದಾಖಲು ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಯಾವುದೇ ಅಧಿಕಾರಿಗಳ ಗಮನಕ್ಕೆ ತಂದರು ಇದುವರೆಗೆ ಪ್ರಯೋಜನವಾಗಿಲ್ಲ. ವ್ಯಕ್ತಿ ಪ್ರಭಾವಕ್ಕೆ ಅಧಿಕಾರಿಗಳು ಬೆದರಿದರೆ? ಅಥವಾ ಅವನ ಎಂಜಲು ಕಾಸಿಗಾಗಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲು ಬಿಟ್ಟಿರಬಹುದಾ? ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದುವರೆಗೂ ಅರಣ್ಯ ಇಲಾಖೆಯಾಗಲಿ, ಕಂದಾಯ ಇಲಾಖೆಯಾಗಲಿ ಯಾವುದೇ ಕ್ರಮ ಜರುಗಿಸಿಲ್ಲ. ಲೇಡಿ ಸಿಂಗಂ ಎಂದೇ ಖ್ಯಾತಿ ಪಡೆದ ಹೊಸನಗರ ತಹಸೀಲ್ದಾರ್ ರಶ್ಮಿ ಹಾಲೇಶ್ ಅವರೇ ಇತ್ತ ಗಮನ ಹರಿಸುವಿರಾ? ಅಮಾಯಕ ಅಜ್ಜಿಯ ಮನೆ ಖಾಸಗಿ ವ್ಯಕ್ತಿಯ ದರ್ಬಾರಿನಿಂದ ರಕ್ಷಿಸುವಿರಾ? ಎಂದು ಗ್ರಾಮಸ್ಥರು ತಮ್ಮ ಅಳಲನ್ನು ಮಾಧ್ಯಮದವರ ಮುಂದೆ ತೋಡಿಕೊಂಡಿದ್ದಾರೆ.