ಶಿವಮೊಗ್ಗ: ದೇಶದ ಅಡಿಕೆ ಆಧಾರಿತ ಆರ್ಥಿಕತೆಯಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸುತ್ತಿದ್ದು, ಅಡಿಕೆ ಮತ್ತು ಅಡಿಕೆ ಆಧಾರಿತ ಉತ್ಪನ್ನಗಳ ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯದ ಪಾಲು ಶೇ.76ಕ್ಕಿಂತ ಹೆಚ್ಚಿದೆ ಎಂಬ ಮಾಹಿತಿ ಕೇಂದ್ರ ಸರ್ಕಾರದಿಂದ ಬಹಿರಂಗವಾಗಿದೆ.
ಮುಂಗಾರು ಅಧಿವೇಶನದಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ರಾಜ್ಯವಾರು ಜಿಎಸ್‌ಟಿ ಸಂಗ್ರಹದ ಕುರಿತು ಕೇಳಿದ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವಾಲಯ ನೀಡಿದ ಉತ್ತರದಲ್ಲಿ ಈ ಅಂಕಿ-ಅಂಶಗಳು ತಿಳಿದುಬಂದಿವೆ.
ಕೇಂದ್ರ ವಿತ್ತ ಸಚಿವಾಲಯದ ಮಾಹಿತಿಯ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ದೇಶದಲ್ಲಿ ಅಡಿಕೆ ಮತ್ತು ಅಡಿಕೆ ಆಧಾರಿತ ಉತ್ಪನ್ನಗಳಿಂದ ಒಟ್ಟು ₹496.34 ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ಇದರಲ್ಲಿ ಕರ್ನಾಟಕದಿಂದ ಮಾತ್ರ ₹379.34 ಕೋಟಿ ಸಂಗ್ರಹವಾಗಿದ್ದು, ಇದು ಒಟ್ಟು ಸಂಗ್ರಹದ ಶೇ.76.42ರಷ್ಟಾಗಿದೆ.
ರಾಜ್ಯದಲ್ಲಿ ಅಡಿಕೆ ಜಿಎಸ್‌ಟಿ ಸಂಗ್ರಹ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ. 2021-22ನೇ ಹಣಕಾಸು ವರ್ಷದಲ್ಲಿ ₹172.62 ಕೋಟಿ ಇದ್ದ ಸಂಗ್ರಹವು 2025-26ರಲ್ಲಿ ₹379.34 ಕೋಟಿಗೆ ಏರಿಕೆಯಾಗಿದೆ. ಅಂದರೆ ಕಳೆದ ಐದು ವರ್ಷಗಳಲ್ಲಿ ಸುಮಾರು ಶೇ.120ರಷ್ಟು ಹೆಚ್ಚಳ ಕಂಡಿದೆ.
ಪ್ರಸಕ್ತ 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿಯೂ ಕರ್ನಾಟಕದಿಂದ ಅಡಿಕೆ ವಲಯದಲ್ಲಿ ₹90.02 ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ಇದೇ ಅವಧಿಯಲ್ಲಿ ದೇಶದ ಒಟ್ಟು ಸಂಗ್ರಹ ₹117.99 ಕೋಟಿ ಆಗಿದ್ದು, ಇದರಲ್ಲಿ ರಾಜ್ಯದ ಪಾಲು ಸುಮಾರು ಶೇ.76.3ರಷ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಬಿ.ವೈ. ರಾಘವೇಂದ್ರ, ಕರ್ನಾಟಕದಲ್ಲಿ ಅಡಿಕೆ ಬೆಳೆಯ ಆರ್ಥಿಕ ಮಹತ್ವವನ್ನು ಈ ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ ಎಂದು ತಿಳಿಸಿದ್ದಾರೆ. ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಲಕ್ಷಾಂತರ ರೈತ ಕುಟುಂಬಗಳು ಅಡಿಕೆ ಕೃಷಿಯನ್ನು ಅವಲಂಬಿಸಿಕೊಂಡಿವೆ. ಈ ಬೆಳೆ ಕೇವಲ ಕೃಷಿಯಲ್ಲ, ರಾಜ್ಯದ ಆರ್ಥಿಕತೆಯ ಪ್ರಮುಖ ಆಧಾರವಾಗಿದೆ ಎಂದರು.
ಅಡಿಕೆ ಬೆಳೆಗಾರರ ಪರವಾಗಿ ಸಂಸತ್ತಿನಲ್ಲಿ ನಿರಂತರವಾಗಿ ಧ್ವನಿ ಎತ್ತುವುದಾಗಿ ಹೇಳಿರುವ ಅವರು, ವೈಜ್ಞಾನಿಕ ಸಂಶೋಧನೆ, ರೋಗ ನಿರ್ವಹಣೆ, ಮಾರುಕಟ್ಟೆ ಸ್ಥಿರತೆ ಹಾಗೂ ಬೆಳೆಗಾರರ ದೀರ್ಘಕಾಲೀನ ಹಿತಾಸಕ್ತಿಗಳ ರಕ್ಷಣೆಗೆ ಅಗತ್ಯ ಕ್ರಮಗಳಿಗಾಗಿ ಪ್ರಯತ್ನ ಮುಂದುವರಿಸುವುದಾಗಿ ತಿಳಿಸಿದ್ದಾರೆ

