HOSANAGARA ; ಶಿಕ್ಷಣವಿದ್ದರೆ ಬದುಕಲು ಸಾಧ್ಯವೆಂದು ಶಾಸಕ, ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು.
ತಾಲೂಕಿನ ಕೋಡೂರಿನ ವಿದ್ಯಾದಾಯನಿ ಎಜುಕೇಶನ್ ಟ್ರಸ್ಟ್‌ನ ಬ್ಲಾಸಂ ಅಕಾಡೆಮಿಯ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗಂಜಿ ಉಂಡರು ಶಿಕ್ಷಣದಿಂದ ವಂಚಿತರಾಗದಿರಿ ಎಂದು ಕಿವಿಮಾತು ಹೇಳಿ, ಮಲೆನಾಡಿನಲ್ಲಿ ಈಗ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು ಈ ಕಳೆದ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆದ ಸಾತ್ವಿಕ್ ಎಂಬ ವಿದ್ಯಾರ್ಥಿ ಈ ಗ್ರಾಮದವರು ಎಂಬುದಕ್ಕೆ ಇದೇ ಸಾಕ್ಷಿ ಎಂದ ಅವರು, ಶೈಕ್ಷಣಿಕ ಪ್ರಗತಿಗೆ ಕ್ರೀಡೆ ಸಹ ಅವಶ್ಯಕವಾಗಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ
ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮೀಜಿಗಳು, ಜಾತಿ, ಮತ ಭೇದವಿಲ್ಲದ ವಸ್ತು ವಿದ್ಯೆ. ವಿದ್ಯೆಗೆ ಮಿಗಿಲಾದ ಶಕ್ತಿ ಯಾವುದೇ ಇಲ್ಲ. ಹತ್ತು ವರ್ಷಗಳಲ್ಲಿ ವಿದ್ಯೆ ಮೂಲಕ ಶ್ರಮಪಟ್ಟಲ್ಲಿ ಮುಂದಿನ 50 ವರ್ಷ ಪರಿಶ್ರಮವಿಲ್ಲದೆ ಜೀವನ ಸಾಧಿಸಬಹುದು. 10 ವರ್ಷ ಶ್ರಮಪಡದಿದ್ದರೆ ಮುಂದಿನ 50 ವರ್ಷ ಕಷ್ಟಕರ ಜೀವನ ಎದುರಿಸಬೇಕಾಗಬಹುದು ಆದುದರಿಂದ ಶ್ರಮಪಟ್ಟು ವಿದ್ಯಾವಂತರಾಗಿ ಸುಖೀ ಜೀವನವನ್ನು ಅನುಭವಿಸಿ ಎಂದು ಮಕ್ಕಳಿಗೆ ಕರೆ ನೀಡಿದರು.
ವಿದ್ಯಾದಾಯಿನಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಬಿ.ಜಿ ಚಂದ್ರಮೌಳಿಗೌಡ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕೋಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್ ಉಮೇಶ್ ಉಪಾಧ್ಯಕ್ಷ ಎಂ ಸುಧಾಕರ್, ಸದಸ್ಯರಾದ ಅನ್ನಪೂರ್ಣ, ಮಂಜಪ್ಪ, ಶೇಖರಪ್ಪ, ಚಂದ್ರಕಲಾ, ವಿದ್ಯದಾಯನಿ ಎಜುಕೇಶನ್ ಟ್ರಸ್ಟ್‌ನ ಸದಸ್ಯರಾದ ಕೆ.ಜಿ ವಿನಯಕುಮಾರ್, ಬಿ.ಎಸ್ ಸುರೇಶ್, ಬಿ.ಎಸ್ ನಟರಾಜ್, ಪುಷ್ಪಾವತಿ ಮಂಜಪ್ಪ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಪ್ರಗತಿಪರ ಕೃಷಿಕ ವಿಜೇಂದ್ರಭಟ್ ಚಿಕ್ಕಜೇನಿ, ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಕೃಷ್ಣಪ್ಪ ಎಂ. ಹುಂಚರೋಡ್, ನಾಟೀ ವೈದ್ಯ ಯಲ್ಲಪ್ಪಶೆಟ್ರು ಶಾಖವಳ್ಳಿ, ದ್ವಿತೀಯ ಪಿಯುಸಿಯಲ್ಲಿ 4ನೇ ರ‍್ಯಾಂಕ್ ಪಡೆದ ಸಾತ್ವಿಕ್ ಕೆ.ವೈ. ಇವರನ್ನು ಸನ್ಮಾನಿಸಲಾಯಿತು.
ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಲ್ಲಕಂಬ ಸಾಹಸ, ನವಿಲು ನೃತ್ಯ, ಕರಾಟೆ ಕಂಸಾಳೆ ಯೋಧರ ಡ್ಯಾನ್ಸ್, ಯಕ್ಷಗಾನ, ಶಿವತಾಂಡವ ನೃತ್ಯ ಹುಂಜ ಡ್ಯಾನ್ಸ್, ಬಾಲರಾಮ ರೂಪಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶಶಿಕುಮಾರ್ ಸ್ವಾಗತಿಸಿದರು. ಸುಧಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರುಸ. ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್ ಅಭಾರ ಮನ್ನಿಸಿದರು.