ರಿಪ್ಪನ್‌ಪೇಟೆ ; ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ, ಅಡಿಕೆ ತೋಟ ಸೇರಿದಂತೆ ಇನ್ನಿತರ ಬೆಳೆ ಒಣಗಿ ಹೋಗುತ್ತಿದ್ದು ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದು ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದ್ದು ಆ ಕಾರಣದಿಂದಾಗಿ ವಿದ್ಯುತ್ ಬಿಲ್ ಪಾವತಿಸುವುದಿಲ್ಲವೆಂದು ಕೋಡೂರು ಸುತ್ತಮುತ್ತಲಿನ ನಾಗರೀಕರು ಗ್ರಾಮ ಪಂಚಾಯ್ತಿ ಎದರು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಕೋಡೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲವೆಂದು ವಿರೋಧಿಸಿ ಇಂದು ಕೋಡೂರು ಗ್ರಾಮ ಪಂಚಾಯ್ತಿ ಬಳಿ ಪ್ರತಿಭಟನೆ ನಡೆಸಿ ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ನಮಗೆ ವಿದ್ಯುತ್ ಸಮಸ್ಯೆ ಪರಿಹರಿಸುವ ತನಕ ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದಾಗ ಬಂದಂತಹ ಮೆಸ್ಕಾಂ ಬಿಲ್ ಕಲೆಕ್ಟರ್ ಬಂದ ದಾರಿಗೆ ಸುಂಕವಿಲ್ಲವೆಂದು ವಾಪಾಸ್ ಆದ ಘಟನೆ ನಡೆದಿದೆ.
ಕೋಡೂರು, ಕಾರಕ್ಕಿ, ಕುನ್ನೂರು, ಮತ್ತಿಘಟ್ಟ, ಕರಿಗೆರಸು, ಹಿಂಡ್ಲೆಮನೆ, ಯಳಗಲ್ಲು ಇನ್ನಿತರ ಗ್ರಾಮಸ್ಥರು, ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಕ್ಷಣವೇ ಕೋಡೂರು ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಮುಂದೆ ವಿದ್ಯುತ್ ಸಮಸ್ಯೆ ಪರಿಹರಿಸುವವರೆಗೆ ನಾವು ಬಿಲ್ ಪಾವತಿ ಮಾಡುವುದಿಲ್ಲ ಎಂದು ಹೇಳಿ ಮೆಸ್ಕಾಂ ಇಲಾಖೆಗೆ ಎಚ್ಚರಿಕೆ ನೀಡಿದ ಪ್ರಸಂಗ ನಡೆದಿದೆ.